ರಾಯಚೂರು,ಅ.೨೬ – ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಸೇನಾ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಬಾರದೇ ಇರುವುದರಿಂದ ರಾಜ್ಯದ ಕರೆಗಳು ಮತ್ತು ಜಲಾಶಯಗಳು ಭಕ್ತಿಹೋಗಿವೆ. ಈ ಹಿನ್ನೆಲೆಯಲ್ಲಿ ರೈತರು ವರುಣ ದೇವನನ್ನು ನಂಬಿಕೊಂಡು ತಮ್ಮ ಜಮೀನುಗಳಲ್ಲಿ ಬಿತ್ತಿದ ಬೆಳೆಗಳನ್ನು ಇಡಿ ದೇಶಕ್ಕೆ ಅನ್ನವನ್ನು ನೀಡುತ್ತಾರೆ, ಬೆಳೆದಿರುವಂತದ ಬೆಳೆಗಳು ಮಳೆ ಇಲ್ಲದೇ ಬಿಸಿಲಿನ ತಾಪಕ್ಕೆ ಈ ಬಾರಿ ಬೆಳೆ ಕೈಗೆ ಬರುವ ನಿರೀಕ್ಷೆ ಬಹಳ ಕಡಿಮೆ ಇದೆ. ಜಮೀನುಗಳಲ್ಲಿ ಭೂಮಿ ಬಿರುಕು ಬಿಟ್ಟಿದೆ. ರೈತರು ಬೇರೆಯವರಿಂದ ಸಾಲ ಪಡೆದುಕೊಂಡು ಬಿತ್ತನೆ ಕೆಲಸಕ್ಕೆ ಖರೀದಿಸಿದ ಬೀಜ, ಗೊಬ್ಬರ, ಎಣ್ಣೆ ಖರೀದಿಸಿದ್ದಾರೆ. ಈ ಬಾರಿ ಬೆಳೆ ಕೈ ಕೊಟ್ಟಿರುವುದರಿಂದ ರೈತರಿಗೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ ಜಿಲ್ಲೆ ಮತ್ತು ತಾಲೂಕುಗಳು ಬರಪೀಡಿತ ಪ್ರದೇಶಗಳನ್ನು ಬರಗಾಲ ಘೋಷಣೆ ಮಾಡಿದ್ದು, ಮೀನ ಮೇಷ ಎಣಿಸದೇ ರಾಜ್ಯದಲ್ಲಿ ಬೆಳೆದ ಬೆಳೆಗಳ ಸಮೀಕ್ಷೆ ಮಾಡಿ ರೈತರುಗಳಿಗೆ ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು. ಪ್ರತಿ ಎಕರೆಗೆ ರೂ.೪೦ ರಿಂದ ೫೦ ಸಾವಿರ ಬೆಳೆನಷ್ಟ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ.ಸದಾನಂದ,ಆನಂದ ಏಗನೂರು,ಪರಮೇಶ,ತಿಮ್ಮಪ್ಪ ಕಡಗೊಳ,ರಂಗಪ್ಪ ಅಸ್ಕಿಹಾಳ,ಗೋವಿಂದ ಮೇಸ್ತ್ರಿ,ಯಲ್ಲಪ್ಪ ಭಂಡಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.