ಬೆಳೆ ಉಳಿಸಿಕೊಡುವಂತೆ ಶಾಸಕ ಮಂಜುಗೆ ಮನವಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.02: ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ರೈತರ ಬೆಳೆಗಳನ್ನು ಉಳಿಸಿಕೊಡುವಂತೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಭಾಗದ ರೈತರು ಶಾಸಕ ಹೆಚ್.ಟಿ.ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶಾಸಕರ ಗೃಹಕಛೇರಿಗೆ ಆಗಮಿಸಿದ ರೈತರು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗುತ್ತಿರುವ ಬವಣೆಗಳನ್ನು ವಿವರಿಸಿದರು. ರಾಜ್ಯ ಸರ್ಕಾರ ರೈತರಿಗೆ ನಿತ್ಯ 07 ಘಂಟೆ ವಿದ್ಯುತ್ ಪೂರೈಕೆ ಮಡುತ್ತಿರುವುದಾಗಿ ಹೇಳುತ್ತಿದೆ. ರಾಜ್ಯ ವಿಧಾನ ಮಂಡಲದಲ್ಲಿಯೂ ವಿದ್ಯುತ್ ಇಲಾಖೆಯ ಸಚಿವರು ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರದ ಆದೇಶಗಳನ್ನು ಸೆಸ್ಕಾಂ ಅಧಿಕಾರಿಗಳು ಪಾಲಿಸುತ್ತಿಲ್ಲ. ನಮ್ಮ ಭಾಗದಲ್ಲಿ ಸೆಸ್ಕಾಂ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಪ್ರತಿಘಂಟೆಗೆ 10 ರಿಂದ 15 ಸಲ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ನಮ್ಮ ಹೊಲಗದ್ದೆಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ. ಅಸಮರ್ಪಕ ವಿದುತ್ ಪೂರೈಕೆಯಿಂದ ನಮ್ಮ ಕಬ್ಬು ಮತ್ತಿತರ ಬೆಳೆಗಳು ಒಣಗುತ್ತಿವೆ ಎಂದು ಒಣಗುತ್ತಿರುವ ಕಬ್ಬಿನ ಗದ್ದೆಗಳ ವೀಡಿಯೋ ಮತ್ತು ಛಾಯಾಚಿತ್ರಗಳನ್ನು ಶಾಸಕರ ಮುಂದೆ ಪ್ರದರ್ಶಿಸಿದ ರೈತರು ವಿದ್ಯುತ್ ಸಮಸ್ಯೆ ಬಗ್ಗೆ ಪಟ್ಟಣದ ಸೆಸ್ಕಾಂ ಅಧಿಕಾರಿಗಳಿಗೆ ಹತ್ತಾರು ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರಾದ ತಾವು ಅಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಬಾಗಕ್ಕೆ ಮಡುವಿನಕೋಡಿ ಮತ್ತು ಕೂಡಲಕುಪ್ಪೆ ಭಾಗದ ಫೀಡರ್‍ಗಳ ಮೂಲಕ ವಿದ್ಯುತ್ ಪೂರೈಕೆ ಮಾಡಿಕೊಡುವಂತೆ ಒತ್ತಾಯಿಸಿದರು. ನಮ್ಮ ಭಾಗದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ ನಮ್ಮ ಒಣಗುತ್ತಿರುವ ಕಬ್ಬು ಮತ್ತಿತರ ಬೆಳೆಗಳನ್ನು ಸಂರಕ್ಷಿಸದಿದ್ದರೆ ನಾವೆಲ್ಲರೂ ಆತ್ಮಹತ್ಯೆ ದಾರಿ ತುಳಿಯಬೇಕಾಗುತ್ತದೆಂದು ರೈತರು ಶಾಸಕರಿಗೆ ನೀಡಿದ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ರೈತರ ಮನವಿ ಸ್ವೀಕರಿಸಿದ ಶಾಸಕ ಹೆಚ್.ಟಿ.ಮಂಜು ಸೆಸ್ಕಾಂ ಜಿಲ್ಲಾ ಅಧೀಕ್ಷಕ ಅಭಿಯಂತರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಸಮಸ್ಯೆಗಳನ್ನು ಚರ್ಚಿಸಿದರು. ತಾಲೂಕಿನಲ್ಲಿ ತೀವ್ರವಾದ ಬರಗಾಲವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಈಗಾಗಲೇ ಹಲವಾರು ವಿದ್ಯುತ್ ಅವಘಡಗಳು ಸಂಭವಿಸಿದ್ದು ಜನ ಜಾನುವಾರುಗಳು ಬಲಿಯಾಗಿವೆ. ನಿಮ್ಮ ಇಲಾಖೆಯ ಅಧಿಕಾರಿಗಳ ಕಾರ್ಯಲೋಪಕ್ಕೆ ತಾಲೂಕಿನಲ್ಲಿ ಇನ್ನೆಷ್ಟು ರೈತರು ಬಲಿಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು ನನ್ನ ಕ್ಷೇತ್ರದಲ್ಲಿ ಸೆಸ್ಕಂ ಅಧಿಕಾರಿಗಳು ಎಸಗುತ್ತಿರುವ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಟಿ.ಸಿ ಅಳವಡಿಸಲು, ಕೆಟ್ಟು ಹೋದ ಟಿ.ಸಿ ಯನ್ನು ತೆಗೆದುಕೊಂಡು ಹೋಗಲು, ಸರಿಪಡಿಸಿದ ಟಿ.ಸಿಯನ್ನು ಚಾರ್ಜ್ ಮಾಡಲು, ಟಿ.ಸಿ ಸಾಗಾಣಿಕೆ ಸೇರಿದಂತೆ ಎಲ್ಲದಕ್ಕೂ ರೈತರು ಹಣಕೊಡಬೇಕಾದ ಪರಿಸ್ಥಿತಿಯಿದೆ. ವಿದ್ಯುತ್ ಇಲಾಖೆ ಪ್ರತಿಯೊಂದು ಕೆಲಸಕ್ಕೂ ಹಣ ನಿಗಧಿ ಮಾಡಿಕೊಂಡು ರೈತರ ಸುಲಿಗೆ ಮಾಡುತ್ತಿದೆ. ನಿಮ್ಮ ನೌಕರರಿಗೆ ಸಂಬಳ ನೀಡುತ್ತಿಲ್ಲವೇ?. ಸಲ್ಲದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ಅಗತ್ಯತೆ ನಮ್ಮ ಕ್ಷೇತ್ರಕ್ಕಿಲ್ಲ. ಸೆಸ್ಕಾಂ ವತಿಯಿಂದ ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ. ಇಲ್ಲದಿದ್ದರೆ ರೈತರ ಹಿತ ಸಂರಕ್ಷಣೆಗಾಗಿ ಒಬ್ಬ ಶಾಸಕನಾಗಿ ನಾನೇ ಬೀದಿ ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್ ಮುಲ್ ನಿರ್ದೇಶಕ ಡಾಲು ರವಿ, ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯಕುಮಾರ್,ಕಟ್ಟೆಕ್ಯಾತನಹಳ್ಳಿ ರೈತರು ಸೇರಿದಂತೆ ಹಲವರಿದ್ದರು.