ಬೆಳೆ ಇಳುವರಿ ಹೆಚ್ಚಳಕ್ಕೆ ಬದು ನಿರ್ಮಾಣ ಪೂರಕ

ಹುಲಸೂರ:ಮೇ.19: ರೈತರ ಹೊಲ ಗದ್ದೆಗಳಲ್ಲಿ ಬದು ನಿರ್ಮಿಸಿಕೊಳ್ಳುವುದರಿಂದ ಒಂದು ಎಕರೆ ಪ್ರದೇಶದಲ್ಲಿ 2,00,000 ಲೀ. ಮಳೆ ನೀರು ಸಂಗ್ರಹವಾಗುತ್ತದೆ. ಇದು ಶೇ.15 ರಷ್ಟು ಅಧಿಕ ಬೆಳೆ ಇಳುವರಿಗೆ ಸಹಾಯಕಾರಿ ಎಂದು ನರೇಗಾ ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ ಹೇಳಿದರು.

ಹುಲಸೂರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಮಂಗಳವಾರ ತಾಲ್ಲೂಕು ಪಂಚಾಯತಿಯು ಪಟ್ಟಣದ ಸಂಗಪ್ಪಾ ಮಂಘಾ ಅವರ ಹೊಲದಲ್ಲಿ ಆಯೋಜಿಸಿದ ಬದು ನಿರ್ಮಾಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಗಳು ನಿರ್ಮಿಸುವುದರಿಂದ ಮಣ್ಣಿನ ಸವಕಳಿ ತಡೆದು ಜಮೀನಿನ ತೇವಾಂಶ ಹೆಚ್ಚಳವಾಗುವುದಲ್ಲದೆ ಪರ್ಯಾಯ ಬೆಳೆಗೆ ಅನುಕೂಲವಾಗುತ್ತದೆ. ಬದುಗಳ ಮೇಲೆ ತೋಟಗಾರಿಕೆ ಸಸಿಗಳಾದ ನುಗ್ಗೆ, ಮಾವು, ನಿಂಬೆ, ನೇರಳೆ, ಸೀತಾಫಲ ಹಾಗೂ ಅರಣ್ಯ ಸಸಿಗಳಾದ ಹೆಬ್ಬೇವು, ಬೇವು, ಹೊಂಗೆ, ಟೀಕ್, ಸಿಲ್ವರ್ ನಾಟಿ ಮಾಡಬಹುದು. ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಕಂದಕ ಬದು ನಿರ್ಮಾಣ ಸಹ ಒಂದು ಮುಖ್ಯ ಉಪಚಾರ ಎಂದರು. ಕರೊನಾ ಲಸಿಕೆಯ ಮಹತ್ವದ ಬಗ್ಗೆ ತಿಳಿ ಹೇಳಿದ ಅವರು, ಗಾಳಿ ಸುದ್ದಿಯಿಂದ ಲಸಿಕೆ ಪಡೆಯಲು ಹಿಂಜರಿದ ಸುಮಾರು 60 ಕೂಲಿಕಾರರ ಮನವೋಲಿಸಿದರು. ಪಂಚಾಯತಿ ವತಿಯಿಂದ ಕೂಲಿಕಾರರಿಗೆ ಮಾಸ್ಕ್ ಸ್ಯಾನಿಟೈಜರ್ ಮತ್ತು ಸಾಬೂನು ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಮಂಗಲಾಬಾಯಿ ಡೊಣಗಾಂವಕರ್, ಪಿಡಿಒ ಭೀಮಶೆಪ್ಪ ದಂಡಿನ್, ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಹರಕೂಡೆ, ಬಸವರಾಜ ಡೊಣಗಾಂವಕರ್, ತಾನಾಜಿ, ಬಸವರಾಜ ಬಾಲಕುಂದೆ, ಗೇಮು, ಕಾಯಕ ಬಂಧುಗಳಾದ ಶಿವಕುಮಾರ ಗಾಯಕವಾಡ್, ನಾಗಪ್ಪ ಹಂದಿಕೇರೆ ಹಾಗೂ ನೂರಕ್ಕೂ ಹೆಚ್ಚು ನರೇಗಾ ಕೂಲಿಕಾರರು ಇದ್ದರು.