ಬೆಳೆಹಾನಿ ಸಮೀಕ್ಷಣಾ ಕಾರ್ಯ ತ್ವರಿತಕ್ಕೆ ಸೂಚನೆ

ಗದಗ, ನ.24: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಸಮೀಕ್ಷಣಾ ಕಾರ್ಯವನ್ನು ತ್ವರಿತಗೊಳಿಸಿ ಪರಿಹಾರ ಒದಗಿಸಲು ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸೂಚನೆ ನೀಡಿದರು.
ಗದಗ ತಾಲೂಕಿನ ಮುಳಗುಂದದಲ್ಲಿಂದು ಮಳೆಯಿಂದಾಗಿ ಹಾನಿಗೊಳಗಾದ ಕೃಷಿ ಹಾಗೂ ತೊಟಗಾರಿಕಾ ಬೆಳೆಗಳಾದ ಮೆನಸಿನಕಾಯಿ, ಹತ್ತಿ ಹಾಗೂ ಶೇಂಗಾ ಬೆಳೆಗಳ ಪ್ರದೇಶವನ್ನು ಪರಿಶೀಲಿಸಿ ಅವರು ಮಾತನಾಡಿದರು. ಮಳೆಯಿಂದಾಗಿ ಹಾನಿಗೊಳಗಾದ ಕೃಷಿ ಪ್ರದೇಶದ ಸಮೀಕ್ಷಣಾ ಕಾರ್ಯದಲ್ಲಿ ವಿಳಂಭಕ್ಕೆ ಆಸ್ಪದ ನೀಡದೆ ಶೀಘ್ರವೇ ಪೂರ್ಣಗೊಳಿಸಬೇಕು. ಸಮೀಕ್ಷಣಾ ಕಾರ್ಯದಲ್ಲಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಹಾನಿಗೊಳಗಾದ ಬೆಳೆಗಳಿಗೆ ಸಾಧ್ಯವಾಷ್ಟು ಬೇಗನೆ ಪರಿಹಾರ ಒದಗಿಸಲು ಪ್ರಥಮಾದ್ಯತೇ ನೀಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಗದಗ ತಾಲೂಕಿನಲ್ಲಿ ಅಂದಾಜು 2545 ಹೆ. ಗೋವಿನ ಜೋಳ, 1800 ಹೆ. ಶೇಂಗಾ, 2345 ಹೆ.ಹತ್ತಿ ಒಟ್ಟು 6690 ಹೆ. ಪ್ರದೇಶದ ಬೆಳೆÀ ಹಾನಿಗೊಳಗಾಗಿದೆ.
ಜಿಲ್ಲೆಯಲ್ಲಿ ಒಟ್ಟು 10494 ಹೆ. ಪ್ರದೇಶದ ಬೆಳೆ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾಗಿದ್ದು ಇದರಲ್ಲಿ 110 ಹೆ. ಭತ್ತ, 2610 ಹೆ. ಗೋವಿನ ಜೋಳ, 2949 ಹೆ. ಶೇಂಗಾ ಹಾಗೂ 4755 ಹೆ.ಪ್ರದೇಶ ಹತ್ತಿ ಬೆಳೆ ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದ್ದು ಸಮೀಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಈ ಸಂದರ್ಭದಲ್ಲಿ ಹಾಜರಿದ್ದರು.