ಬೆಳೆಯಲ್ಲಿ ಫಾಲ್ ಸೈನಿಕ ಹುಳು ಭಾದೆ: ರೈತರಿಗೆ ಸಲಹೆಗಳು

ಕಲಬುರಗಿ,ಡಿ.08:ಕಲಬುರಗಿ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕಾಂತ ಜೀವಣಗಿ ಅವರು ಇತ್ತೀಚೆಗೆ ಕಲಬುರಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೋಳ ಬೆಳೆದ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದಾಗ ಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಭಾದೆ ಕಂಡು ಬಂದಿದ್ದು, ಈ ಫಾಲ್ ಸೈನಿಕ ಹುಳವು ಪ್ರಮುಖವಾಗಿ ಜೋಳ ಮತ್ತು ಮೆಕ್ಕೆಜೋಳ ಬೆಳೆಯಲ್ಲಿ ಕಂಡು ಬಂದಿದ್ದು, ತಡವಾದ ಬಿತ್ತನೆ ಪ್ರದೇಶದಲ್ಲಿ ಇದರ ಹಾವಳಿಯು ಕಂಡು ಬಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕೀಡೆಯು ಮೊಟ್ಟೆಗಳನ್ನು ಗುಂಪಾಗಿ ಇಡಲಿದ್ದು, ಸುಮಾರು 100 ರಿಂದ 200 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಂದ ಹೊರಬಂದ ಕೀಡೆಯು ಸುರುಳಿಯಲ್ಲಿ ಅತಿ ಹೆಚ್ಚು ಹಾನಿ ಮಾಡುತ್ತದೆ ಮತ್ತು ಹಾನಿಗೊಳಗಾದ ಜೋಳದ ಬೆಳೆಯ ಮೇಲೆ ಪ್ರಾಸ್ (Frass) ಕಂಡು ಬರುತ್ತದೆ.
ಆದ್ದರಿಂದ ರೈತ ಬಾಂಧವರು ಫಾಲ್ ಸೈನಿಕ ಹುಳ ಭಾದೆ ಅದರ ಲಕ್ಷಣಗಳು ಕಂಡು ಬಂದಲ್ಲಿ ಇಮಾಮೆಕ್ಟಿನ್ ಬೆಂಜೋಯೇಟ ಶೇ. 5 SG 0.4 gm ಅಥವಾ ನೊವಾಲುರಾನ್ 0.75 ml ಅಥವಾ ಕ್ಲೋರಾಂಟ್ರಾನಿಲಿಪ್ರೋಲ 18.5 SC 0.3 ml ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು ಮತ್ತು ಸಿಂಪರಣಾ ದ್ರಾವಣವು ನೇರವಾಗಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕೆಂದು ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ ತಾಲೂಕಿನ ಅವರಾದ ಹೊಬಳಿಯ ಸಣ್ಣೂರ ಗ್ರಾಮದಲ್ಲಿ ಜೋಳದ ಬೆಳೆಯಲ್ಲಿ ಫಾಲ್ ಸೈನಿಕ ಹುಳು ಭಾದೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕೃಷಿ ಅಧಿಕಾರಿ ನೀಲಕಂಠ ಹಾಗೂ ಸಹಾಯಕ ಕೃಷಿ ಅಧಿಕಾರಿ ರಾಜೇಂದ್ರ ಕಲ್ಲಪ್ಪ ಹಾಗೂ ರೈತರು ಉಪಸ್ಥಿತರಿದ್ದರು.