ಬೆಳೆದ ಭತ್ತ ಸಂಪೂರ್ಣ ಬೆಂಕಿ

ಕೆ.ಆರ್.ಪೇಟೆ.ಜ.04:- ಬಡ ರೈತನೊಬ್ಬ ಐದು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಭತ್ತ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದ ನರಸೇಗೌಡರ ಮಗ ಚಂದ್ರೇಗೌಡ ಎಂಬುವವರು ತಮಗೆ ಸೇರಿದ ಅಕ್ಕಿಹೆಬ್ಬಾಳು ಗ್ರಾಮದ ಸರ್ವೇ ನಂಬರ್ 100 ಮತ್ತು 101 ರಲ್ಲಿನ ಒಂದುವರೆ ಎಕರೆಯಲ್ಲಿ ಭತ್ತ ಕಟಾವು ಮಾಡಿ ತೆನೆಸಹಿತ ಭತ್ತದ ಹುಲ್ಲನ್ನು ತಮ್ಮ ಗ್ರಾಮದ ಪಕ್ಕದಲ್ಲಿ ಮೆದೆ ಹಾಕಿದ್ದರು 2-3 ದಿನದಲ್ಲಿ ಭತ್ತ ಬಡಿಸಲು ಏರ್ಪಾಡು ಮಾಡಿಕೊಂಡಿದ್ದರು.
ಆದರೆ ಸೋಮವಾರ ಸಂಜೆಯ ವೇಳೆಗೆ ಯಾರೋ ಕಿಡಿಗೇಡಿಗಳು ಬೀಡಿಸೇದಿ ಬೀಡಿಯ ತುಂಡನ್ನು ಎಸೆದಿದ್ದಾರೆ. ಅದು ಸಮೀಪದಲ್ಲಿ ಒಟ್ಟಿದ್ದ ಹುಲ್ಲಿನ ಮೆದೆಗೆ ಹೊತ್ತಿಕೊಂಡು ಉರಿಯಲಾರಂಭಿಸಿದೆ. ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿದರೂ ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಭತ್ತ ಮತ್ತು ಹುಲ್ಲು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
ಬಡ ರೈತ ಚಂದ್ರೇಗೌಡ ಮತ್ತು ಕುಟುಂಬದವರಿಗೆ ಇದ್ದ ಅಷ್ಟೇ ಜಮೀನಿನಲ್ಲಿ ಐದು ತಿಂಗಳಿನಿಂದ ಭತ್ತ ಪೆÇೀಷಣೆ ಮಾಡಿ, ನಾಟಿಮಾಡಿ, ಕಳೆತೆಗೆದು, ಭತ್ತಕಟಾವು ಸೇರಿದಂತೆ 25000 ಕ್ಕೂ ಹೆಚ್ಚು ಖರ್ಚು ಮಾಡಿದ್ದರು. ಆದರೆ ದಾರಿಹೋಕರ ಅಥವಾ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಬಡ ಕುಟುಂಬ ಬೀದಿಗೆ ಬೀಳುವಂತಾಗಿದೆ. ತಾಲ್ಲೂಕು ಆಡಳಿತ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಮಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕೆಂದು ರೈತ ಚಂದ್ರೇಗೌಡ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.