ಬೆಳೆಗೆ ಸಿಗದ ಬೆಲೆ -ಸಾಲಗಾರ ರೈತ ಆತ್ಮಹತ್ಯೆ

ಕೂಡ್ಲಿಗಿ.ಅ.30:- ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಇದ್ದು ಬ್ಯಾಂಕಿನಲ್ಲಿ ಮಾಡಿದ ಬೆಳೆ ಸಾಲ ಹಾಗೂ ಕೈಗಡ ಸಾಲ ತೀರಿಸಲಾಗದೆ ಮನನೊಂದ ರೈತ ಕ್ರಿಮಿನಾಶಕ ಸೇವಿಸಿದ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿ ರೈತ ದಾವಣಗೆರೆ ಆಸ್ಪತ್ರೇಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶೇಖರಪ್ಪ (38) ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತನು ತನ್ನ ಹೊಲದಲ್ಲಿ ಬೆಳೆದ ಹತ್ತಿ ಹಾಗೂ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಸಿಗದೇ ಇದ್ದು ತಾನು ಮಾಡಿದ ಚಿಕ್ಕಜೋಗಿಹಳ್ಳಿಯ ಎಸ್ ಬಿ ಐ ಬ್ಯಾಂಕಿನಲ್ಲಿ 50ಸಾವಿರ ಬೆಳೆ ಸಾಲ ಹಾಗೂ ಮಗಳ ಮದುವೆಗೆ ಮಾಡಿದ ಕೈಗಡ ಸಾಲ ಹೇಗೆ ತೀರಿಸಬೇಕೆಂದು ಮನ ನೊಂದ ರೈತ ಶೇಖರಪ್ಪ ಅಕ್ಟೊಬರ್ 24ರಂದು ಹೊಲದಲ್ಲಿ ಕ್ರಿಮಿನಾಶಕ ಸೇವನೆ ಮಾಡಿದ್ದು ತಕ್ಷಣ ಚಿಕ್ಕಜೋಗಿಹಳ್ಳಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದು ಗುರುವಾರದಂದು ಮೃತ ರೈತನ ತಂದೆ ಹೊಸದುರ್ಗ ತಿಮ್ಮಪ್ಪ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.