ಬೆಳೆಗಳಿಗೆ ಬಿಡಾಡಿ ಕುದುರೆಗಳ ಹಾವಳಿ

ಮಾರೆಪ್ಪ ನಾಯಕ
ಸಿರುಗುಪ್ಪ, ಸೆ.16- ತಾಲೂಕಿನಲ್ಲಿ ಒಂದು ಕಡೆ ಕೋರೊನಾ ವೈರಸ್ ಭಯ ಕಾಡುತ್ತಿದೆ, ಮತ್ತೋಂದು ಕಡೆ ಪ್ರಾರಂಭದಲ್ಲಿ ಉತ್ತಮ ಮಳೆ ಸುರಿದು ಬೆಳೆಯು ಚೆನ್ನಾಗಿ ಬರುವಾಗ ನಿರಂತರ ಮಳೆಯಿಂದಾಗಿ ಬೆಳೆಯನ್ನು ಉಳಿಸಿಕೊಳ್ಳುವ ಸಾಹಸದಲ್ಲಿ ರೈತರಿದ್ದರೆ ಈ ಬಿಡಾಡಿ ಕುದುರೆಗಳ ಕಾಟದಿಂದ ಬೇಸತ್ತಿದ್ದಾರೆ.
ತಾಲೂಕಿನ ಹಳೇಕೋಟೆ, ತೆಕ್ಕಲಕೋಟೆ, ದೇವಿನಗರ, ಬೈರಾಪುರ, ಶಾನವಾಸಪುರ, ಇಬ್ರಾಯಮಪುರ, ಬಗ್ಗೂರು ಗ್ರಾಮಗಳ ಜಮೀನುಗಳು ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಈ ಜಮೀನುಗಳಲ್ಲಿ ಹತ್ತಿ, ತೊಗರೆ, ಭತ್ತ ನಾಟಿ ಮಾಡಿದ್ದು ಮೇವು ತಿನ್ನಲು ಹೋಗುತ್ತಿರುವ ಬಿಡಾಡಿ ಕುದುರೆಗಳು ಬೆಳೆಯನ್ನು ತುಳಿದು ಹಾಳು ಮಾಡುತ್ತಿವೆ. ಬಿಡಾಡಿ ಕುದುರೆಗಳು ಗುಂಪುಗಳಾಗಿ ಬೆಳೆಗಳಿಗೆ ನುಗ್ಗುತ್ತಿವೆ ರೈತರು ಅವುಗಳನ್ನು ಓಡಿಸಿದರೂ ಒಬ್ಬರ ಹೊಲದಿಂದ ಮತ್ತೊಬ್ಬರ ಹೊಲಕ್ಕೆ ಲಗ್ಗೆ ಹಾಕುತ್ತಿವೆ.
ಯಾರಿಗೆ ದೂರು ನೀಡುವುದು? : ಕುದುರೆಗಳು ಹಾಳು ಮಾಡಿದ ಬೆಳೆಗಳ ಬಗ್ಗೆ ಯಾರಿಗೆ ದೂರು ನೀಡುವುದು ಎಂಬುದು ರೈತರಿಗೆ ಯಕ್ಷ ಪ್ರಶ್ನೆಯಾಗಿದೆ. ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ ಇಲಾಖೆ ಸಂಪರ್ಕಿಸಿದರು ಇದಕ್ಕೆ ಪರಿಹಾರ ದೊರೆಯುತ್ತದೆ? ಕುದುರೆಗಳನ್ನು ಕಟ್ಟಲು ರೈತರ ಕೈಗೆ ಸಿಗುವುದಿಲ್ಲ, ಹೊಲದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ, ಚಿನ್ನಾಟ ಆಡಿ ಬೆಳೆಯನ್ನು ಹಾಳು ಮಾಡುತ್ತಿವೆ.
ಕುರಿಗಾಹಿಗಳಿಗೆ ಎಚ್ಚರಿಸಬೇಕು : ಕುರಿಗಾಹಿಗಳು ತಮ್ಮ ಹೆಚ್ಚುವರಿ ಕುದುರೆಗಳನ್ನು ಎಲ್ಲಿ ಬೇಕಾಂದರಲ್ಲಿ ಬಿಟ್ಟು ಹೋಗಿದ್ದಾರೆ, ಅವುಗಳು ತಮ್ಮ ಆಹಾರಕ್ಕಾಗಿ ರೈತರ ಬೆಳೆ ಹಾಳು ಮಾಡುತ್ತಿವೆ, ಕುದುರೆಗಳನ್ನು ಬಿಟ್ಟಿಹೋಗಿರುವ ಕುರಿಗಾಹಿಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು ಎನ್ನುತ್ತಾರೆ ರೈತರು.

ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ತಿನ್ನುವುದು ಅಲ್ಲದೆ ಬೆಳೆಯಲ್ಲಿ ಓಡಾಡಿ ಎಲ್ಲಾ ಬೆಳೆಯನ್ನು ಹಾನಿ ಮಾಡುತ್ತಿವೆ, ಎಷ್ಟು ದೂರು ಹೊಡೆದು ಬಂದರೂ ಮತ್ತೆ ಬರುತ್ತವೆ, ಸಂಬಂಧ ಪಟ್ಟ ಇಲಾಖೆಯವರು ಈ ಬಿಡಾಡಿ ಕುದುರೆಗಳ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಮರಿನಾಗಪ್ಪ, ರೈತ ತೆಕ್ಕಲಕೋಟೆ