ಬೆಳಿಗ್ಗೆ ೫ ರಿಂದ ರಾತ್ರಿ ೧೦ರವರೆಗೆ ಪಾರ್ಕ್ ತೆರೆಯಲು ಸೂಚನೆ

ಬೆಂಗಳೂರು, ಜೂ.೧೧-ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಪಾರ್ಕ್ ಗಳನ್ನು ಬೆಳಿಗ್ಗೆ ೫ರಿಂದ ರಾತ್ರಿ ೧೦ರವರೆಗೂ ತೆರೆಯಲು ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ನಗರದಲ್ಲಿಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರೀಕರ ಆರೋಗ್ಯ ದೃಷ್ಟಿಯಿಂದ ಪಾರ್ಕ್ ಗಳ ಭೇಟಿ ಅವಧಿ ಹೆಚ್ವಿಸಲಾಗಿದ್ದು, ಅಗತ್ಯ ಮೂಲಸೌಲಭ್ಯ ಹಾಗೂ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.ಬೆಂಗಳೂರು ೧೨೦೦ ಕ್ಕೂ ಹೆಚ್ಚು ಉದ್ಯಾನವನಗಳನ್ನು ಹೊಂದಿದೆ. ಪ್ರಾಯಶಃ ದೇಶದಲ್ಲೇ ಅತಿ ಹೆಚ್ಚು ಅಂದರೆ ಪ್ರತಿಯೊಂದು ವಾರ್ಡ್‌ನಲ್ಲಿ ಉದ್ಯಾನವನವಿದೆ.ಸಾರ್ವಜನಿಕರು ವಾಕಿಂಗ್, ಜಾಗಿಂಗ್, ವ್ಯಾಯಾಮ, ಸಾಮಾಜಿಕವಾಗಿ ಮತ್ತು ಮುಖ್ಯವಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಹೊರಗಿನ ಪರಿಸರದಲ್ಲಿ ಕೆಲಸ ಮಾಡುವ ಕಾರ್ಮಿಕರ ವಿಶ್ರಾಂತಿಗಾಗಿ ಉದ್ಯಾನವನಗಳು ಪ್ರಯೋಜನಕಾರಿಯಾಗಿರುತ್ತದೆ.ಉದ್ಯಾನವನಗಳು ನಮ್ಮ ನಗರದಲ್ಲಿ ಅತ್ಯಮೂಲ್ಯ ಮತ್ತು ಅಗತ್ಯವಿರುವ ಹಸಿರು ಸ್ಥಳಗಳಾಗಿರುವುದರಿಂದ ಅವುಗಳನ್ನು ದಿನವಿಡೀ ತೆರೆದಿಡಲು ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆ ಇರುತ್ತದೆ. ನಮ್ಮದು ಸಾರ್ವಜನಿಕರ ಮಾತನ್ನು ಆಲಿಸುವ ಹಾಗೂ ಸ್ಪಂದಿಸುವ ಸರ್ಕಾರವಾಗಿದ್ದು, ಈಗ ಪ್ರಸ್ತುತ ಬೆಳಿಗ್ಗೆ ೫ ರಿಂದ ೧೦ ರವರೆಗೆ ಮತ್ತು ನಂತರ ಮಧ್ಯಾಹ್ನ ೧:೩೦ ರಿಂದ ರಾತ್ರಿ ೮ ರವರೆಗೆ ಇರುವ ವೇಳೆಗೆ ಬದಲಾಗಿ, ಇನ್ನು ಮುಂದೆ ಪಾಲಿಕೆಯ ಎಲ್ಲಾ ಉದ್ಯಾನವನಗಳು ಬೆಳಿಗ್ಗೆ ೫ ರಿಂದ ರಾತ್ರಿ ೧೦ ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ವಿವರಿಸಿದರು.ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ಇಲಾಖೆ ಅಡಿ ಬೆಂಗಳೂರು ಮತ್ತು ಹಸಿರನ್ನಾಗಿಸಲು ಪಣ ತೊಡಲಾಗಿದೆ.ಕಳೆದ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತೋಟಗಾರಿಕೆ, ಅರಣ್ಯ ಹಾಗೂ ಕೆರೆಗಳ ವಿಭಾಗಗಳನ್ನು ಒಂದುಗೂಡಿಸಿ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ಎಂದು ಮರು ನಾಮಕರಣ ಮಾಡಲಾಗಿದೆ ಎಂದರು.ಇದರಿಂದ ಪರಿಸರಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವವರೊಂದಿಗೆ ಹವಾಮಾನ ವೈಪರೀತ್ಯದಿಂದಾಗುವ ಅಪಾಯಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುವ ಗುರಿಗಳನ್ನು ಹೊಂದಿದೆ.ಅದೇ ರೀತಿ, ಬೆಂಗಳೂರು ನಗರವು ಭಾರತದಲ್ಲಿ ಹವಾಮಾನ ಮೂರನೆಯ ನಗರವಾಗಿದ್ದು, ಕ್ರಿಯಾಯೋಜನೆಯನ್ನು ಸದರಿ ಹವಾಮಾನ ಕ್ರಿಯಾಯೋಜನೆಯು ಜಾಗತಿಕ ಮಟ್ಟದಲ್ಲಿ ದತ್ತಾಂಶಗಳನ್ನು ಆಧರಿಸಿ ಎಲ್ಲಾ ಕ್ಷೇತ್ರಗಳ ಒಳಗೊಳ್ಳುವಿಕೆ ಹಾಗೂ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.