ಬೆಳಿಗ್ಗೆ ಡೆಲಿವರಿ ಬಾಯ್ ರಾತ್ರಿ ಬೈಕ್ ಕಳವುಖದೀಮನ ಸೆರೆ

ಬೆಂಗಳೂರು,ಏ.೧೬-ಬೆಳಗಿನ ವೇಳೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ರಾತ್ರಿ ವೇಳೆ ಬೈಕ್ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಬೈಕ್ ಕಳ್ಳನನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಪಿನಗರದ ಜರಗನಹಳ್ಳಿಯ ದೀಪಕ್ ಅಲಿಯಾಸ್ ದೀಪು(೨೩)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ ೩ಲಕ್ಷ ಮೌಲ್ಯದ ೫ ಬೈಕ್ ಗಳನ್ನು ಜಪ್ತಿ ಮಾಡಿ ೧೪ ಪ್ರಕರಣಗಳನ್ನು ಪತ್ತೆಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯು ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳ ಹ್ಯಾಂಡಲ್ ಲಾಕ್ ಮುರಿದು ಕ್ಷಣಾರ್ಧದಲ್ಲಿಯೇ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ಬೈಕ್ ಮಾರಾಟಕ್ಕೂ ಮೊದಲು ದಾಖಲಾತಿಯನ್ನೆಲ್ಲಾ ನಂತರ ಕೊಡುತ್ತೇನೆ ಎಂದು ಯಮಾರಿಸಿ, ಕಡಿಮೆ ಬೆಲೆಗೆ ಬೈಕ್ ಮಾರಿ ಮೋಜು ಮಾಡುತ್ತಿದ್ದ ಎಂದು ಹೇಳಿದರು.
ಬಂಧಿತ ಆರೋಪಿಯು ಬೈಯಪ್ಪನಹಳ್ಳಿಯ ಬೈಕ್ ಕಳವು ಮಾಡಿದ್ದ ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಇನ್ಸ್‌ಪೆಕ್ಟರ್ ಶಿವಕುಮಾರ್ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯ ಬಂಧನದಿಂದ ಜೆಪಿನಗರ, ತಿಲಕ್ ನಗರ, ಪುಟ್ಟೇನಹಳ್ಳಿ, ಪರಪ್ಪನ ಅಗ್ರಹಾರ,ಕೋರಮಂಗಲ,ಬಸವನಗುಡಿ, ಸೇರಿದಂತೆ ೧೪ ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿಸಿದರು.
ಕಳ್ಳನ ಒದ್ದಾಟ:
ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನಕ್ಕೆ ಕಳ್ಳನೊಬ್ಬ ವಿಫಲ ಯತ್ನ ನಡೆಸಿರುವ ಘಟನೆ ಜೆ.ಪಿ ನಗರದಲ್ಲಿ ನಡೆದಿದೆ.
ಕಳೆದ ಏ.೧೫ ರ ಮುಂಜಾನೆ ಬುಲೆಟ್ ಬೈಕ್‌ನ ಹ್ಯಾಂಡಲ್ ಲಾಕ್ ಕಾಲಿನಿಂದ ಒದ್ದು ಮುರಿಯಲು ಯತ್ನಿಸಿದ್ದಾನೆ. ಬೈಕ್ ಕದಿಯಲು ಕಳ್ಳನ ಒದ್ದಾಟವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಂದೆರಡು ನಿಮಿಷ ಬುಲೆಟ್ ಬೈಕ್ ಅನ್ನೇ ನೋಡುತ್ತಾ, ಜತೆಗೆ ಧರಿಸಿದ್ದ ಟೀ ಶರ್ಟ್‌ನಲ್ಲೇ ಮುಖವನ್ನು ಮುಚ್ಚಿಕೊಂಡಿದ್ದ. ನಂತರ ಬುಲೆಟ್ ಬೈಕ್ ಏರಿ ಕುಳಿತು ಅತ್ತಿಂದಿತ್ತ ಕಣ್ಣಾಡಿಸಿ ಕಾಲಿನಿಂದ ಒದ್ದು ಹ್ಯಾಂಡಲ್ ಮುರಿಯಲು ಯತ್ನಿಸಿದ್ದಾನೆ. ಹೀಗೆ ನಾಲ್ಕೈದು ಬಾರಿ ಪ್ರಯತ್ನಿಸಿದ ನಂತರ ಮತ್ತ ಮನೆ ಮುಂದೆಯೇ ಬೈಕ್ ನಿಲ್ಲಿಸಿ, ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಹೊರಟು ಹೋಗಿದ್ದಾನೆ. ಸದ್ಯ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.