ಬೆಳಿಗ್ಗೆ ಖರೀದಿಗೆ ಜನಜಾತ್ರೆ: ಮಧ್ಯಾಹ್ನ ದೇವನಗರಿ ಸ್ತಬ್ಧ

ದಾವಣಗೆರೆ,ಜೂ.3: ಕೋವಿಡ್-19 ಎರಡನೇ ಅಲೆಯ ಸೋಂಕಿನ ಸರಪಳಿ ತುಂಡಿರಿಸಲು ಜೂನ್ 7ರ ವರೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಿರುವ ಮಧ್ಯೆಯೇ ಇಂದು ಮಧ್ಯಾಹ್ನ 12 ಗಂಟೆಯ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ್ದರ ಹಿನ್ನೆಲೆಯಲ್ಲಿ ದಿನಸಿ, ತರಕಾರಿ, ಮೀನು, ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದರು.ಇಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಲಾಕ್‌ಡೌನ್ ಸಡಿಲಿಸಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬೆಳ್ಳಂ ಬೆಳಿಗ್ಗೆ ಮಳೆ ಸುರಿಯಲಾರಂಬಿಸಿದ್ದರಿAದ 8 ಗಂಟೆ ವರೆಗೆ ಜನರು ಮನೆ ಬಿಟ್ಟು ಹೊರ ಬರಲಿಲ್ಲ. ಆದರೆ, ದಿನಸಿ, ತರಕಾರಿ, ಮೀನು, ಮಾಂಸ, ಮದ್ಯದಂಗಡಿಗಳನ್ನು ತೆರೆದು ವ್ಯಾಪರ ನಡೆಸಲು ಕಾದು ಕುಳಿತಿದ್ದರು. ಆದರೆ, ಮಳೆ ಸುರಿಯುತ್ತಿದ್ದರಿಂದ ಫುಟ್‌ಪಾತ್ ವ್ಯಾಪಾರಿಗಳು ತೊಂದರೆ ಅನುಭವಿಸಿದರು.
ಮಳೆ ಬಿಡುತ್ತಿದ್ದಂತೆ ಬೆಳಿಗ್ಗೆ 8 ಗಂಟೆಯ ನಂತರ ಜನ ಮಾರುಕಟ್ಟೆಯತ್ತ ಧಾವಿಸಲು ಆರಂಭಿಸಿದ್ದರಿAದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ರಾಜನಹಳ್ಳಿ ಹನುಮಂತಪ್ಪ ಛತ್ರದ ಮುಂದಿನ ಪಿಬಿ ರಸ್ತೆ, ವಿಜಯಲಕ್ಷಿö್ಮ ರಸ್ತೆ, ಚಾಮರಾಜಪೇಟೆ, ಮಂಡಿ ಪೇಟೆಗಳ ದಿನಸಿ, ತರಕಾರಿ, ಹಣ್ಣು ಅಂಗಡಿಗಳ ಮುಂದೆ ಅಗತ್ಯ ವಸ್ತುಗಳ ಖರೀದಿಗಾಗಿ ಜನತೆ ಲಗ್ಗೆ ಇಟ್ಟಿದ್ದರು. ಪ್ರಮುಖ ಬಡಾವಣೆಗಳಾದ ವಿದ್ಯಾನಗರ, ವಿವೇಕಾನಂದ ಬಡಾವಣೆ, ತರಳಬಾಳು ಬಡಾವಣೆ, ನಿಜಲಿಂಗಪ್ಪ ಬಡಾವಣೆ. ವಿನೋಬ ನಗರ ಸೇರಿದಂತೆ ಮತ್ತಿತರೇ ಭಾಗಗಳಲ್ಲಿನ ದಿನಸಿ ಅಂಗಡಿಗಳಲ್ಲಿ ಜನರು ಖರೀದಿಗೆ ಮುಂದಾಗಿದ್ದರು.
ಇನ್ನೂ ಬಾರ್‌ಗಳ ಮುಂದೆ ಮದ್ಯ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಆದರೆ, ಈ ವೇಳೆ ಮಾಸ್ಕ್ ಧರಿಸಿರುವುದನ್ನು ಬಿಟ್ಟರೆ, ಸಾಮಾಜಿಕ ಅಂತರ ಎನ್ನುವುದು ಮರೆಯಾಗಿತ್ತು.
ಅಗತ್ಯ ವಸ್ತುಗಳ ಖರೀದಿಗೆ ಜನರು ಬಂದ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಜೋರಾಗಿಯೇ ಇತ್ತು. ಕಾರುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ಯಾವುದೇ ಅಡೆತಡೆ ಇಲ್ಲದೇ ಸಾಗಿತ್ತು. ಇನ್ನು ಕೆಲವು ದ್ವಿಚಕ್ರ ವಾಹನದಲ್ಲಿ ನಿಯಮ ಮೀರಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ದೃಶ್ಯ ಕಂಡುಬಂತು.
ಮಧ್ಯಾಹ್ನ 12 ಗಂಟೆಯ ಬಳಿಕ ಅಂಗಡಿ-ಮುಗ್ಗಟ್ಟುಗಳ ಬಾಗಿಲು ಹಾಕಿಸಲು ಪೊಲೀಸರು ರಸ್ತೆಗೆ ಇಳಿಯುತ್ತಿದ್ದಂತೆ ಒಂದೊಂದೇ ಅಂಗಡಿಗಳು ಬಾಗಿಲು ಹಾಕತೋಡಗಿದವು. ಅಲ್ಲದೆ, ಪೊಲೀಸರು ರಸ್ತೆಗೆ ಬಂದಿದ್ದ ಜನರನ್ನು ಮನೆಗೆ ಕಳುಹಿಸಲು ಮುಂದಾದರು. ಹೀಗಾಗಿ, ಮಾರಕಟ್ಟೆ ಪ್ರದೇಶ, ರಸ್ತೆಯಲ್ಲಿದ್ದ ಜನಸಂದಣಿ ನಿಧಾನವಾಗಿ ಕರಗತೊಡಗಿತು. ಆದ್ದರಿಂದ ಮಧ್ಯಾಹ್ನದ ನಂತರ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನರ ಓಡಾಟ ತಹಬದಿಗೆ ಬಂದು ರಸ್ತೆಗಳು ಬಿಕೋ ಎನ್ನುತ್ತಿದ್ದವು.
—————