ಬೆಳಗಾವ ನಮ್ಮದು, ಒಂದಿಂಚು ರಾಜ್ಯದ ಸ್ಥಳ ಬಿಡುವ ಪ್ರಶ್ನೆಯೇ ಇಲ್ಲ

ಗಡಿ ಭಾಗದ ಕನ್ನಡ ವಿದ್ಯಾರ್ಥಿಗಳ ಶೈಕ್ಷಣಿಕ ಸೌಕರ್ಯಕ್ಕೆ ತಕ್ಷಣವೇ ಕ್ರಮ

  • ರಾಯಚೂರು.ನ.೦೧- ಕರ್ನಾಟಕದ ಗಡಿ ಭಾಗದ ತೆಲಂಗಾಣ, ಆಂಧ್ರ ಪ್ರದೇಶದ ವಿದ್ಯಾರ್ಥಿಗಳು ಕನ್ನಡ ವಿದ್ಯಾರ್ಜನೆ ಮುಂದುವರೆಸಲು ಅವಕಾಶ ಕಲ್ಪಿಸುವುದಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಅವರು ಹೇಳಿದರು.
    ಅವರಿಂದು ೬೭ ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿರುವ ಕನ್ನಡ ಶಾಲಾ ಮಕ್ಕಳಿಗೆ ರಾಜ್ಯದಲ್ಲಿ ಹೆಚ್ಚುವರಿ ಶಿಕ್ಷಣ ಮುಂದುವರೆಸಲು ತಾಂತ್ರಿಕ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆದ ವಿಷಯಕ್ಕೆ ಪ್ರತಿಕ್ರಿಯಿಸಿದರು. ಕನ್ನಡದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಿಕ್ಷಣಕ್ಕಾಗಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆಂದರು.
    ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಪುಂಡಾಟಿಕೆಯನ್ನು ನಿಯಂತ್ರಿಸುವುದರೊಂದಿಗೆ ಕರ್ನಾಟಕದ ಒಂದಿಂಚು ಜಾಗ ಸಹ ಬಿಡದೆ, ಸಂರಕ್ಷಿಸುವ ಜವಾಬ್ದಾರಿಗೆ ಸರ್ಕಾರ ಬದ್ಧವಾಗಿದೆ. ಬೆಳಗಾವಿ ನಮ್ಮದು. ಅದರ ಒಂದಿಂಚೂ ಜಾಗ ಕೂಡ ಬಿಟ್ಟು ಕೊಡುವುದಿಲ್ಲ. ಕನ್ನಡ ಭಾಷೆ, ನೆಲ ಜಲ ಹಿತಾಸಕ್ತಿಗೆ ಧಕ್ಕೆ ಬರದಂತೆ ರಾಜ್ಯ ಸರಕಾರ ನೋಡಿಕೊಳ್ಳುತ್ತದೆ. ಕನ್ನಡ ವಿರೋಧಿಗಳಿಗೆ ಈಗಾಗಲೇ ಬೆಳಗಾವಿ ಜನ ಬುದ್ದಿಕಲಿಸಿದ್ದಾರೆ. ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಆಡಳಿತದಲ್ಲಿ ಕನ್ನಡದ ಪಾರಮ್ಯವೇ ಇದೆ. ಕನ್ನಡ ವಿರೋಧಿಗಳನ್ನು ಬೆಳಗಾವಿ ಜನ ದೂರಿಕರಿಸಿದ್ದಾರೆ.
    ಕಬ್ಬಿನ ಬೆಳೆಯ ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರೊಂದಿಗೆ ಮಾತುಕತೆ ನಡೆಸಲಾಗಿದೆ. ಇತರ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಸರಕಾರ ರೈತರಿಗೆ ಬಾಕಿ ಹಣವನ್ನು ನೀಡಲಾಗಿದೆ. ಅವರ ಹಿತ ಕಾಯುವಲ್ಲಿ ಸರಕಾರ ಹಿಂದೆ ಬಿದ್ದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಉಪಸ್ಥಿತರಿದ್ದರು.