ಬೆಳಗಾವಿ ವಿಭಾಗದ ಎಸ್ಸೆಸ್ಸೆಲ್ಸಿ ರ್ಯಾಂಕ್ ವಿಜೇತರಿಗೆ ಸನ್ಮಾನ


ಧಾರವಾಡ,ಮೇ.12: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಸಂಪಾದಿಸಿ ರಾಜ್ಯದ ಗಮನಸೆಳೆದಿರುವ ಬೆಳಗಾವಿ ವಿಭಾಗದ ಇಬ್ಬರು ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ಪರವಾಗಿ ಇಲ್ಲಿಯ ಆಯುಕ್ತರ ಕಚೇರಿ ವತಿಯಿಂದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ಅಭಿನಂದಿಸಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಿರೇಹೊಳಿಯನ್ನು ಸವದತ್ತಿ ಬಿ.ಇ.ಓ. ಕಚೇರಿಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಶಾಲು ಹೊದಿಸಿ ಗೌರವಿಸಿದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ಮಾತನಾಡಿ, ಕಾಡಿದ ಬಡತನದ ಮಧ್ಯೆಯೇ ನಿರಂತರವಾಗಿ ಶಿಸ್ತಿನ ಅಧ್ಯಯನದ ಬದ್ಧತೆಯನ್ನು ಅಳವಡಿಸಿಕೊಂಡು ಹೆಸರಿಗೆ ತಕ್ಕಂತೆ `ಅನುಪಮ ಸಾಧನೆ’ ಮಾಡಿರುವ ಕುಮಾರಿ ಹಿರೇಹೊಳಿ 625ಕ್ಕೆ 625 ಅಂಕಗಳನ್ನು ಪಡೆದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ವಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಾಳೆ. ವಿದ್ಯಾರ್ಥಿನಿಯ ಮುಂದಿನ ಶಿಕ್ಷಣವು ಹೀಗೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಆಯುಕ್ತರ ಕಚೇರಿಯ ಆಡಳಿತ ಉಪನಿರ್ದೇಶಕ ಎಸ್.ಬಿ.ಬಿಂಗೇರಿ, ಸವದತ್ತಿ ಬಿ.ಇ.ಓ. ಶ್ರೀಶೈಲ ಕರಿಕಟ್ಟಿ, ಗುರು ಬಿದರಿ, ರಾಜಶ್ರೀ ಹಿರೇಹೊಳಿ ಇತರರು ಇದ್ದರು. ಬೆಳಗಾವಿ ವಿಭಾಗ ವ್ಯಾಪ್ತಿಗೆ ಒಳಪಟ್ಟ ವಿಜಯಪೂರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸ್ಫರ್ಡ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕು. ಭೀಮನಗೌಡ ಹನುಮಂತಗೌಡ ಬಿರಾದಾರ ಸಹ 625ಕ್ಕೆ 625 ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ್ದು, ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ಅಭಿನಂದಿಸಿ, ಮುಂದಿನ ವರ್ಷಗಳ ವ್ಯಾಸಂಗದ ಅಧ್ಯಯನದಲ್ಲಿಯೂ ಇದೇ ರೀತಿ ಮೇರು ಸಾಧನೆ ಮಾಡಲು ಸಲಹೆ ಮಾಡಿ ಶುಭ ಕೋರಿದರು. ಮುದ್ದೇಬಿಹಾಳ ಬಿ.ಇ.ಓ. ನಾಯಕ ಅವರು ಶಿಕ್ಷಣ ಇಲಾಖೆಯ ಪರವಾಗಿ ಕುಮಾರ ಬಿರಾದಾರ ಅವನನ್ನು ಶಾಲು ಹೊದಿಸಿ ಗೌರವಿಸಿದರು.