ಬೆಳಗಾವಿ: ಲಾಕ್‍ಡೌನ್ ವಿಸ್ತರಣೆಗೆ ಡಿಸಿಎಂ ಕಾರಜೋಳ ಮನವಿ

ಬೆಳಗಾವಿ, ಜೂ.10: ಬೆಳಗಾವಿ ಜಿಲ್ಲೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪಾಸಿಟಿವಿಟಿ ದರ ಶೇ.9 ರ ಆಸುಪಾಸಿನಲ್ಲಿ ಇರುವುದರಿಂದ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿಯೊಂದಿಗೆ ಲಾಕ್‍ಡೌನ್ ಇನ್ನೊಂದು ವಾರ ಕಾಲ ವಿಸ್ತರಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಬೆಳಗಾವಿ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಇಂದು ನಡೆದ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಆಟೋಮೊಬೈಲ್, ಕಟ್ಟಡ ನಿರ್ಮಾಣದಂತಹ ಪ್ರಮುಖ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಇನ್ನೊಂದು ವಾರ ಲಾಕ್‍ಡೌನ್ ಮುಂದುವರಿಸಬೇಕು. ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ರೇಷನ್ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಮಕ್ಕಳ ಆಸ್ಪತ್ರೆಯನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ ಎಂದು ಸಚಿವ ಕಾರಜೋಳ ವಿವರಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 135 ತಂಡಗಳನ್ನು ರಚಿಸಿಕೊಂಡು ಇದುವರೆಗೆ 1300 ಕ್ಕೂ ಗ್ರಾಮಗಳಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ (ಆರ್‍ಎಟಿ) ಮಾಡಲಾಗಿದ್ದು, ಇತರೆ ಪರೀಕ್ಷೆ ಸೇರಿದಂತೆ ಒಟ್ಟಾರೆ ಪಾಸಿಟಿವಿಟಿ ದರ ಶೇ. 8.9 ರಷ್ಟಿದೆ. ಗಡಿ ಭಾಗದ ದೊಡ್ಡ ಜಿಲ್ಲೆಯಾಗಿರುವುದರಿಂದ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಇನ್ನೂ ಒಂದು ವಾರ ಲಾಕಡೌನ್ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಆದ್ದರಿಂದ ಲಾಕಡೌನ್ ಮುಂದುವರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆಗೆ ಪ್ರಯತ್ನಿಸಿದರು.
ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆ ಇದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಶೇ.10 ಹಾಗೂ ಅದಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ. ಇನ್ನೊಂದು ವಾರ ಅವಕಾಶ ಸಿಕ್ಕರೆ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಗೊಳಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ರ್ಯಾಪಿಡ್ ಆಂಟಿಜೆನ್ ಟೆಸ್ಟ್‍ನಲ್ಲಿ ಪಾಸಿಟಿವಿಟಿ ದರ ಶೇ.4 ಕ್ಕಿಂತ ಕಡಿಮೆಯಿದೆ. ಆದರೆ ಆರ್.ಟಿ.-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿ ಕಂಡುಬಂದಿದೆ. ಇನ್ನೊಂದು ವಾರ ಕಾಲಾವಕಾಶ ಸಿಕ್ಕರೆ ಪಾಸಿಟಿವಿಟಿ ದರ ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದರು.