ಬೆಳಗಾವಿ ಮೂಲದ ನಟಿ ಸುಲೋಚನಾ ಲಾಟ್ಕರ್ ನಿಧನ

ಮುಂಬೈ,ಜೂ.೫-ಹಿಂದಿ ಮತ್ತು ಮರಾಠಿ ಚಿತ್ರರಂಗದ ಖ್ಯಾತ ಹಿರಿಯ ನಟಿ ಸುಲೋಚನಾ ಲಾಟ್ಕರ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಮೊಮ್ಮಗ ಪರಾಗ್ ಅಜ್ಗಾಂವ್ಕರ್ ತಿಳಿಸಿದ್ದಾರೆ.
ಇಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸುಲೋಚನಾ ಲಾಟ್ಕರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜುಲೈ ೩೦, ೧೯೨೮ ರಂದು ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಖಡಕ್ಲಟ್ ಗ್ರಾಮದಲ್ಲಿ ಸುಲೋಚನಾ ಲಾಟ್ಕರ್ ಜನಿಸಿದರು. ೧೯೪೩ರಲ್ಲಿ ಚಿತ್ರೋದ್ಯಮಕ್ಕೆ ಪ್ರವೇಶಿಸಿದರು. ಆಕೆ ಮರಾಠಿ, ಹಿಂದಿ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ’ಕಟೀಪತಂಗ್’, ’ದಿಲ್ ದೇಕೋ ದೇಖೋ’ , ’ಗೋರಾ ಔರ್ ಕಾಲಾ’ ಮುಂತಾದ ಹಲವು ಸಿನಿಮಾಗಳಲ್ಲಿ ಆಕೆಯ ಪಾತ್ರಗಳು ಚಿರಸ್ಮರಣಿಯವಾಗಿ ಉಳಿದಿವೆ. ’ಸಂಗತ್ಯೇ ಐಕಾ’, ’ಮೋಲ್ಕಾರಿನ್’, ’ಮರಾಠಾ ತಿಟುಕಾ ಮೇಲ್ವಾವಾ’, ’ಸಾದಿ ಮಾನಸಂ’, ’ಏಕ್ತಿ’ ಸುಲೋಚನಾ ವೃತ್ತಿಜೀವನದಲ್ಲಿ ಮರೆಯಲಾಗದ ಚಿತ್ರಗಳು.
ಮೊದಲಿಗೆ ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಸುಲೋಚನಾ ಲಾಟ್ಕರ್ ನಂತರ ಬಾಲಿವುಡ್ ಪ್ರವೇಶಿಸಿದರು. ಮೋತೀಲಾಲ್ ಜೊತೆ ಅವರು ನಟಿಸಿದ ’ಮುಕ್ತಿ’ ಚಿತ್ರ ಕೂಡ ಜನಪ್ರಿಯತೆ ಗಳಿಸಿತ್ತು. ಆ ನಂತರ ಪೃಥ್ವೀರಾಜ್ ಕಪೂರ್, ನಜೀರ್ ಹುಸ್ಸೇನ್, ಅಶೋಕ್ ಕುಮಾರ್‌ರೊಂದಿಗೆ ಸಹನಟರಾಗಿ ಆಕೆ ಕೆಲಸ ಮಾಡಿದರು. ನಾಯಕಿಯಾಗಿ ೩೦ ರಿಂದ ೪೦ ಸಿನಿಮಾಗಳಲ್ಲಿ ನಟಿಸಿದರು.೧೯೫೯ ರಲ್ಲಿ ಬಂದ ’ದಿಲ್ ದೇಕೆ ದೇಖೋ’ ಚಿತ್ರದಲ್ಲಿ ಅವರು ಮೊದಲು ತಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ನಂತರ ೧೯೯೫ ರವರೆಗೆ ಎಲ್ಲ ಪ್ರಮುಖ ನಟ- ನಟಿಯರಿಗೆಯರಿಗೆ ತಾಯಿ ಪಾತ್ರ ನಿರ್ವಹಿಸಿದರು.
ಮರಾಠಿಯಲ್ಲಿ ೫೦, ಹಿಂದಿಯಲ್ಲಿ ೨೫೦ ಸಿನಿಮಾಗಳಲ್ಲಿ ಸುಲೋಚನಾ ಲಾಟ್ಕರ್ ನಟಿಸಿದ್ದರು. ಅವರಿಗೆ ೧೯೯೯ರಲ್ಲಿ ’ಪದ್ಮಶ್ರೀ’, ೨೦೦೯ರಲ್ಲಿ ’ಮಹಾರಾಜ್ಯ ಭೂಷಣ’ ಪ್ರಶಸ್ತಿಗಳು ಲಭಿಸಿದ್ದವು. ಜೀವನಮಾನ ಶ್ರೇಷ್ಠ ಸಾಧನೆಗೂ ಪುರಸ್ಕಾರ ಲಭಿಸಿತ್ತು. ನಟನೆಗೆ ಭಾಷೆಯ ಮಿತಿ ಇಲ್ಲ ಎಂದು ತಮ್ಮ ಅದ್ಭುತ ಅಭಿನಯದಿಂದ ಸುಲೋಚನಾ ಸಾಬೀತು ಮಾಡಿದ್ದರು.
ಸುಲೋಚನಾ ಲಾಟ್ಕರ್ ಅವರ ೮೫ನೇ ಹುಟ್ಟುಹಬ್ಬಕ್ಕೆ ಅಮಿತಾಬ್ ಬಚ್ಚನ್ ಭೇಟಿ ಮಾಡಿ ಶುಭಾಶಯ ಕೋರಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಗ್‌ಬಿ ಹಂಚಿಕೊಂಡಿದ್ದರು. ಇನ್ನು ೨೫ ದಿನಗಳಲ್ಲಿ ಅವರು ೯೪ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು.
ನಟಿಯ ಅಗಲಿಕೆಗೆ ಬಾಲಿವುಡ್ ಗಣ್ಯರು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಸುಲೋಚನಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.