ಬಸವ ಕಲ್ಯಾಣದಲ್ಲಿ ಬಿಜೆಪಿ, ಮಸ್ಕಿಯಲ್ಲಿ ಕೈ ಗೆಲುವು ತೂಗುಯ್ಯಾಲೆಯಲ್ಲಿ ಬೆಳಗಾವಿ ಫಲಿತಾಂಶ

ಬೆಂಗಳೂರು,ಮೇ ೨- ರಾಜ್ಯದ ಒಂದು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿ, ಸಮಬಲ ಸಾಧಿಸಿವೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಗೆಲುವಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಪ್ರತಿ ಸುತ್ತಿನಲ್ಲೂ ಮುನ್ನಡೆ ಬದಲಾಗುತ್ತಿದೆ.
೫೦ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡ ಸಂದರ್ಭದಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ, ಬಿಜೆಪಿಯ ಮಂಗಳಾ ಅಂಗಡಿಯವರಿಗಿಂತ ೧೦ ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಜಯದ ಮಾಲೆ ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ.
ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಶರಣುಸಲಗಾರ, ಮಸ್ಕಿಯಲ್ಲಿ ಕಾಂಗ್ರೆಸ್‌ನ ಬಸನಗೌಡ ತುರವಿಹಾಳ ಜಯಭೇಙರಿ ಬಾರಿಸಿದ್ದಾರೆ.
ಮಸ್ಕಿಯಲ್ಲಿ ಬಸನಗೌಡ ಪಾಟೀಲ್ ತುರವಿಹಾಳ, ಬಿಜೆಪಿಯ ಪ್ರತಾಪ್‌ಗೌಟ ಪಾಟೀಲ್ ವಿರುದ್ಧ ೨೬ ಸಾವಿರ ಮತಗಳ ಅಂತರದಿಂದ ಜಯ ಗೆಲುವು ಸಾಧಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ೨೦೦ ಮತಗಳ ಅಂತರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಸನಗೌಡ ತುರವಿ ಹಾಳ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವಿನ ದಡ ಸೇರಿದ್ದಾರೆ.
ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸಚಿವರಾಗುವ ಕನಸು ಕಂಡಿದ್ದ ಪ್ರತಾಪ್‌ಗೌಡ ಪಾಟೀಲ್ ಸೋತು ಮುಖಭಂಗಕ್ಕೆ ಒಳಗಾಗಿದ್ದಾರೆ.
ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಶರಣುಸಲಗಾರ ಕಾಂಗ್ರೆಸ್‌ನ ಮಾಲಾ ನಾರಾಯಣರಾವ್ ಅವರನ್ನು ೨೦,೯೦೪ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬಸವಕಲ್ಯಾಣದಲ್ಲಿ ಅನುಕಂಪದ ಅಲೆ ಕೆಲಸ ಮಾಡಿಲ್ಲ. ಕೋವಿಡ್‌ಗೆ ಬಲಿಯಾಗಿದ್ದ ಕಾಂಗ್ರೆಸ್‌ನ ಶಾಸಕ ನಾರಾಯಣರಾವ್ ಅವರ ಪತ್ನಿ ಮಾಲಾ ನಾರಾಯಣರಾವ್ ಅವರು ಪರಾಭವಗೊಂಡಿದ್ದಾರೆ.
ಇಲ್ಲಿ ಬಿಜೆಪಿಯ ಶರಣುಸಲಗಾರ ಗೆಲುವಿನ ನಗೆ ಬೀರಿದ್ದಾರೆ. ಮೊದಲ ಬಾರಿಗೆ ಶರಣು ಸಲಗಾರ ವಿಧಾನಸಭೆ ಪ್ರವೇಶಿಸಿದ್ದಾರೆ.
ಬಿಜೆಪಿಗೆ ಎಚ್ಚರಿಕೆಯ ಗಂಟೆ
ರಾಜ್ಯಾದ್ಯಂತ ಕುತೂಹಲ ಕೆರಳಿಸಿ ಆಡಳಿತಾರೂಢ ಬಿಜೆಪಿಗೆ ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಗ್ನಿ ಪರೀಕ್ಷೆಯಾಗಿದ್ದ ೨ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶ ಎಚ್ಚರಿಕೆಯ ಗಂಟೆಯಾಗಿದೆ.
ಅಧಿಕಾರದಲ್ಲಿದ್ದರೂ ಬಿಜೆಪಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವುದು ರಾಜಕೀಯವಾಗಿ ಒಂದು ರೀತಿ ಹಿನ್ನೆಡೆಯೇ ಸರಿ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದಕ್ಕೆ ಈ ಫಲಿತಾಂಶ ತಾಜಾ ನಿದರ್ಶನವಾಗಿದೆ.
ಮಸ್ಕಿಯಲ್ಲಿ ಬಿಜೆಪಿಗೆ ಆಗಿರುವ ಸೋಲು ಆ ಪಕ್ಷದ ನಾಯಕರಿಗೆ ಅರಗಿಸಿಕೊಳ್ಳಲಾಗದಂತಹ ಪೆಟ್ಟು ನೀಡಿದೆ. ಅದರಲ್ಲೂ ಮುಖ್ಯಮಂತ್ರಿ ಪುತ್ರ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಸ್ಕಿ ಚುನಾವಣಾ ಉಸ್ತುವಾರಿ ಹೊತ್ತಿದ್ದರೂ ಅಲ್ಲಿ ಬಿಜೆಪಿ ಸೋತಿರುವುದು ಅಚ್ಚರಿ ಮೂಡಿಸಿದೆ.
ಬಸವಕಲ್ಯಾಣದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಸಮಾಧಾನಪಟ್ಟುಕೊಂಡಿದೆಯಾದರೂ ಬಿಜೆಪಿಯ ಪಾರಂಪರಿಕ ಮತ ಬ್ಯಾಂಕ್ ಆದ ಲಿಂಗಾಯತ ಸಮುದಾಯ ಬಿಜೆಪಿಯ ಕೈ ಬಿಟ್ಟಿಲ್ಲ. ಹಾಗಾಗಿ, ಬಸವಕಲ್ಯಾಣದಲ್ಲಿ ಬಿಜೆಪಿ ಗೆದ್ದಿದೆ.
ಮಸ್ಕಿ ಉಪಚುನಾವಣೆಯ ಗೆಲುವು ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಚೈತನ್ಯ ನೀಡಿದಂತಾಗಿದೆ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್‌ಗೆ ಈ ಗೆಲುವು ಮತ್ತಷ್ಟು ಹುರುಪು-ಹುಮ್ಮಸ್ಸು ತಂದಿದೆ.
ಕಾಂಗ್ರೆಸ್ ನಾಯಕರು ಈ ಗೆಲುವಿನಿಂದ ಸಂತುಷ್ಟರಾಗಿದ್ದು, ಪಕ್ಷದ ಸಾಮೂಹಿಕ ನಾಯಕತ್ವಕ್ಕೆ ಸಂದ ಜಯ ಇದಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಜೆಡಿಎಸ್ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿತ್ತು. ಆದರೆ, ಅಲ್ಲಿ ಆ ಪಕ್ಷದ ಅಭ್ಯರ್ಥಿ ಸೈಯದ್‌ಅಲಿ ಖಾದ್ರಿ ನಿರೀಕ್ಷೆಯಷ್ಟು ಮತ ಪಡೆದಿಲ್ಲ. ಇಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ ಎಂಬುದು ಸಾಬೀತಾದಂತಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಕೂಬಾ ಹೆಚ್ಚಿನ ಮತ ಗಳಿಸಲು ವಿಫಲರಾಗಿ ಸೋತು ಮನೆ ಸೇರುವಂತಾಗಿದೆ.

ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ
ಶರಣು ಸಲಗಾರ (ಬಿಜೆಪಿ)-೭೦,೫೫೬
ಮಾಲಾ ನಾರಾಯಣರಾವ್ (ಕಾಂಗ್ರೆಸ್)-೫೦,೧೦೮
ಸೈಯದ್‌ಅಲಿ ಖಾದ್ರಿ (ಜೆಡಿಎಸ್)-೧೧,೩೯೦
ಮಲ್ಲಿಕಾರ್ಜುನ ಕೂಬಾ (ಪಕ್ಷೇತರ)-೯೩೯೦