ಬೆಳಗಾವಿ ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು25: ಬೆಳಗಾವಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ, ಶಂಕರ್ ಮಾಡಲಗಿ ಜಂಟಿಯಾಗಿ ಅಗ್ರಹಿಸಿದರು.
ಬೈಲಹೊಂಗಲ ಪಟ್ಟಣದಲ್ಲಿ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಉಪವಿಭಾಗಧಿಕಾರಿ ಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೆಲವೊಂದು ಭಾಗಗಳಲ್ಲಿ ಸಕಾಲಕ್ಕೆ ಮಳೆ ಬಾರದಿರುವ ಹಿನ್ನೆಲೆ ಬಿತ್ತನೆ ಮಾಡದಿರುವ ಪರಿಸ್ಥಿತಿ ಒಂದು ಕಡೆಯಾದರೆ, ಸಾಲ ಮಾಡಿ ಬೀಜ ಗೊಬ್ಬರ ತಂದು ಬಿತ್ತನೆ ಮಾಡಿ ಬೀಜ ಮೊಳಕೆ ಒಡೆಯದೆ ಭೂಮಿಯಲ್ಲಿಯೇ ಕಮರಿ ಹೋಗಿದ್ದರಿಂದ ಕಣ್ಣೀರಿಡುತ್ತಿರುವ ಬಹುತೇಕ ರೈತರು ಮತ್ತೊಂದೆಡೆ.
ಹೀಗಿರುವಾಗ ಜಿಲ್ಲೆಯಾದ್ಯಂತ ಮುಂಗಾರು ಫಸಲು ಕನಸಿನ ಮಾತಾಗಿದೆ. ಬೆಳಗಾವಿಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಸುವಂತೆ ಠರಾವು ಮಾಡಿ ಪ್ರತಿ ಎಕರೆಗೆ 50,000 ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ರೈತರು ಬ್ಯಾಂಕುಗಳಲ್ಲಿ ಸಾಲ ಮಾಡಿ ಬಿತ್ತನೆ ಮಾಡಿ ಸಕಾಲಕ್ಕೆ ಮಳೆಯಾಗದಿರುವ ಹಿನ್ನೆಲೆ ಕೈ ಸುಟ್ಟುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಬ್ಯಾಂಕ ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಸರ್ಕಾರ ತಕ್ಷಣ ರೈತರಿಗೆ ನೋಟಿಸ್ ನೀಡದಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಬೇಕು.
ರೈತರ ಪಂಪ್ ಸೆಟ ಗಳಿಗೆ ನಿರಂತರ ಹತ್ತು ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಮಲ್ಲಿಕಾರ್ಜುನ ವಾಲಿ,ಶಿವನ ಸಿಂಗ್ ಮೋಕಾಶಿ,ಸುರೇಶ ಸಂಪಗಾವಿ, ಮಹಾಂತೇಶ ಕಮತ,ಬಸವರಾಜ ಬಿಜ್ಜುರ ಮಾತನಾಡಿದರು.
ಇದಕ್ಕೂ ಮುಂಚೆ ನಗರದ ಎಸ್, ಆರ್, ಸರ್ಕಲನಲ್ಲಿನ ಕ್ರಾಂತಿವೀರೆ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು ಉಪವಿಭಾಗಧಿಕಾರಿಗಳ ಕಾರ್ಯಾಲಯದ ವರೆಗೆ ದಾರಿಯುದ್ಧಕ್ಕೂ ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಹಾಕುತ್ತ ಸಾಗಿದರು.
ಬಸವರಾಜ ಹಣ್ಣಿಕೇರಿ, ಬೀರಪ್ಪ ದೇಶನೂರ,ಮಹಾಂತೇಶ ಹಿರೇಮಠ, ಮಡಿವಾಳಪ್ಪ ಹೋಟಿ,ವಾಯ್. ಎಸ್. ಪಾಟೀಲ, ಬಸವರಾಜ ಹಿತ್ತಲಮನಿ, ಶಿವಪುತ್ರಪ್ಪ ತಟವಟಿ ಸೇರಿದಂತೆ ವಿವಿಧ ರೈತ ಸಂಘಟನೆ ಮುಖಂಡರು ಇದ್ದರು.