ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ-ಅರವಿಂದ ಪಾಟೀಲ್ ಜಯಭೇರಿ

ಬೆಳಗಾವಿ,ನ7- ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ಮಾಜಿ ಶಾಸಕ ಅರವಿಂದ ಪಾಟೀಲ ಜಯ ಸಾಧಿಸಿದರು.
ನಿನ್ನೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ 3 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅರವಿಂದ್ ಪಾಟೀಲ, ಕೃಷ್ಣಾ ಅನಗೋಳ ಹಾಗೂ ಶ್ರೀಕಾಂತ ಡವಣೆ ಜಯ ಸಾಧಿಸಿದ್ದಾರೆ.
ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ್ 25 ಮತಗಳನ್ನು ಪಡೆದರೆ ಅವರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಶಾಸಕ ಅರವಿಂದ ಪಾಟೀಲ್ 27 ಮತಗಳನ್ನು ಪಡೆಯುವ ಮೂಲಕ 2 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ನಗರದ ಬಿ.ಕೆ.ಮಾಡೆಲ್ ಸ್ಕೂಲ್‍ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದಿತ್ತು. ಚುನಾವಣೆಯ ನಂತರ ಫಲಿತಾಂಶ ಹೊರಬರುತ್ತಿದಂತೆ ಅರವಿಂದ ಪಾಟೀಲ್ ಅವರ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಮಹಾಂತೇಶ ದೊಡ್ಡಗೌಡರ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಜರಿದ್ದರು.
ಡಿಸಿಸಿ ಬ್ಯಾಂಕ್‍ನ ಒಟ್ಟು 16 ಸ್ಥಾನಗಳಿಗೆ ಈಗಾಗಲೇ 13 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಉಳಿದ 3 ಸ್ಥಾನಗಳಿಗೆ ಚುನಾವಣೆ ನಿನ್ನೆ ನಡೆದಿದ್ದು, ಈಗ ಒಟ್ಟು 16 ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ, ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ, ಚಿಕ್ಕೋಡಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಮಹಾಂತೇಶ ದೊಡ್ಡಗೌಡರ, ಸವದತ್ತಿ ಶಾಸಕ ಆನಂದ ಮಾಮನಿ, ಗೋಕಾಕ ಅಂಕಲಗಿಯ ಶಿವಾನಂದ ಡೋಣಿ, ಬೆಳಗಾವಿ ಅಂಕಲಗಿಯ ರಾಜೇಂದ್ರ ಅಂಕಲಗಿ, ರಾಯಭಾಗದ ಅಣ್ಣಾಸಾಹೇಬ ಕಲಗುಡೆ, ಅಥಣಿ ಶೆಗುಣಸಿಯ ಅಶೋಕ ಅವಕ್ಕನವರ, ಗೋಕಾಕ ಕಲ್ಲೋಳಿಯ ನೀಲಕಂಠ ಕಪ್ಪಲಗುದ್ದಿ, ಗೋಕಾಕ ಕಲ್ಲೋಳಿಯ ಸತೀಶ ಕಡಾಡೆ, ಸವದತ್ತಿ, ಮುನವಳ್ಳಿಯ ಪಂಚಮಗೌಡ ದ್ಯಾಮನಗೌಡರ, ಗೋಕಾಕ ಮೂಡಲಗಿಯ ಸುಭಾಶ ಢವಳೇಶ್ವರ ಈ 13 ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು.
ನಿನ್ನೆ ನಡೆದ ಚುನಾವಣೆಯಲ್ಲಿ ಖಾನಾಪುರದ ಅರವಿಂದ ಪಾಟೀಲ, ರಾಮದುರ್ಗ ತಾಲೂಕಿನ ಕಟಕೋಳದ ಶ್ರೀಕಾಂತ ಡವಣ,ಬೆಳಗಾವಿ ಶಿಂದೋಳ್ಳಿಯ ಕೃಷ್ಣಾ ಅನಗೋಳಕರ ಈ ಮೂವರು ಜಯಸಾಧಿಸಿದ್ದಾರೆ.