ಬೆಳಗಾವಿ ಉಪ-ಸಮರ ಕೈನಿಂದ ಸತೀಶ್ ಸ್ಪರ್ಧೆ

ಬೆಂಗಳೂರು, ಮಾ. ೨೬- ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬೆನ್ನಲ್ಲೆ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಶಾಸಕ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಕಳೆದ ವಾರವೇ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಕಟಿಸಿತ್ತು. ಇನ್ನೂ ಚುನಾವಣೆ ಘೋಷಣೆಯಾಗದ ಸಿಂದಗಿ ಕ್ಷೇತ್ರಕ್ಕೂ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಿತ್ತು. ಅದರಂತೆ ಬಸವಕಲ್ಯಾಣದಿಂದ ದಿ. ಶಾಸಕ ನಾರಾಯಣರಾವ್ ಅವರ ಪತ್ನಿ ಮಾಲಾ,ಮಸ್ಕಿ ಕ್ಷೇತ್ರದಿಂದ ಬಸನಗೌಡತುರವಿಹಾಳ ಹಾಗೂ ಸಿಂಧಗಿ ಕ್ಷೇತ್ರದಿಂದ ಮಾಜಿ ಸಚಿವ ದಿ. ಎಂ.ಸಿ. ಮನಗುಳಿ ಅವರ ಪುತ್ರ ಅಶೋಕ್ ಮನಗುಳಿ ಅವರಿಗೆ ಉಪಚುನಾವಣೆ ಟಿಕೆಟ್ ನೀಡಲಾಗಿತ್ತು.
ಲೋಕಸಭಾ ಚುನಾವಣೆಗೆ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವುದು ನಿಶ್ಚಿತವಾಗಿತ್ತು. ಆದರೆ ಅಧಿಕೃತ ಪ್ರಕಟಣೆ ಅಷ್ಟೆ ಬಾಕಿ ಇತ್ತು. ಬಿಜೆಪಿ ನಿನ್ನೆ ರಾತ್ರಿಯಷ್ಟೇ ಮೂರು ಕ್ಷೇತ್ರಗಳ ಉಪಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಈಗ ಉಪಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದ್ದು, ಜೆಡಿಎಸ್ ಬಸವಕಲ್ಯಾಣ ಕ್ಷೇತ್ರಕ್ಕೆ ಮಾತ್ರ ಗಮನ ಕೇಂದ್ರೀಕರಿಸಿದೆ, ಬೆಳಗಾವಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಲಾಗಿದೆ.
ಬಸವಕಲ್ಯಾಣ ಕ್ಷೇತ್ರಕ್ಕೆ ಜೆಡಿಎಸ್ ಸ್ಥಳೀಯ ಮುಸ್ಲಿಂ ಮುಖಂಡ ಸೈಯದ್ ಉಸ್ತಾದ್ ಆಲಿ ಖಾದ್ರಿ ಅವರಿಗೆ ಟಿಕೆಟ್ ನೀಡಿದೆ.
ಮೂರು ಉಪಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಂತಿಮ ಅಭ್ಯರ್ಥಿಗಳು ವಿವರ ಈ ರೀತಿ ಇದೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ- ಮಂಗಳಾ ಸುರೇಶ್ ಅಂಗಡಿ,
ಕಾಂಗ್ರೆಸ್- ಸತೀಶ್ ಜಾರಕಿಹೊಳಿ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ
ಬಿಜೆಪಿ-ಶರಣ ಸಲಗಾರ
ಕಾಂಗ್ರೆಸ್- ಮಾಲಾನಾರಾಯಣರಾವ್
ಮಸ್ಕಿ ವಿಧಾನಸಭಾ ಕ್ಷೇತ್ರ
ಬಿಜೆಪಿ-ಪ್ರತಾಪ್‌ಗೌಡ ಪಾಟೀಲ್
ಕಾಂಗ್ರೆಸ್-ಬಸನಗೌಡ ತುರವಿ ಹಾಳ