ಬೆಳಗಾವಿ ಉಪಸಮರ: ಶಾಂತಿಯುತ ಮತದಾನ

ಬೆಳಗಾವಿ, ಏ 17: ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಇಂದು ಶಾಂತಿಯುತವಾಗಿ ಮತದಾನ ನಡೆಯಿತು.
ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನಕ್ಕೆ ಕ್ಷೇತ್ರದ ಜನತೆ ಮತಗಟ್ಟೆಗಳಿಗೆ ಬಂದು ಉತ್ಸಾಹದಿಂದ ಮತ ಚಲಾಯಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 18,13,567 ಮತದಾರರಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನಕ್ಕೆ ಒಟ್ಟು 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಆದರೆ ರಾಮದುರ್ಗ ತಾಲೂಕಿನಲ್ಲಿ ಮತದಾರರು ಮತದಾನಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆಯಿತು.
ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕತಡಸಿ ಹಾಗೂ ಓಗಳಾಪೂರ ಎಸ್.ಎಲ್.ಟಿ. ಗ್ರಾಮಸ್ಥರು ಪ್ರವಾಹದಲ್ಲಿನ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಮತದಾನಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆಯಿತು.
ಕೋವಿಡ್ ಮುಂಜಾಗೃತೆ:
ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಕೋವಿಡ್ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾಮಾಜಿಕ ಅಂತರದಿಂದ ಮತದಾರರು ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಕೆಲ ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಿ ವ್ಯವಸ್ಥೆ ಕಲ್ಪಿಸಿದ್ದು, ಮಹಿಳೆಯರು ಹಾಗೂ ವಯೋವೃದ್ಧರು ಆಗಮಿಸಿ ಮತದಾನ ಮಾಡಿದರು.
ಬೆಳಿಗ್ಗೆ ಕ್ಷೇತ್ರದ ಕೆಲ ಮತಗಟ್ಟೆಗಳು ಮತದಾರರು ಬರದೇ ಬಿಕೋ ಎನ್ನುತ್ತಿದ್ದವಾದರೂ ತದನಂತರ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಅವರು ಕೆಲ ಮತಗಟ್ಟೆಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.