
ಬೆಂಗಳೂರು, ನ. ೭- ಪರಿಶಿಷ್ಟ ಜಾತಿಯ ಒಳ ಮೀಸಲಾಗಿ ಸಂಬಂಧಿಸಿದಂತೆ ನ್ಯಾ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಜಾರಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಿನ್ನೆ ಮಾದಿಗ ಸಮುದಾಯದ ಸಚಿವರು, ಶಾಸಕರು, ಮುಖಂಡರು ಸಭೆ ನಡೆಸಿ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ನಾವು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಎಸ್ಸಿ-ಎಸ್ಟಿ ಸಮಾವೇಶ ಮಾಡಿ ಆ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುವ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದೇವು. ಕಾರಣಾಂತರಗಳಿಂದ ಮೊದಲ ಅಧಿವೇಶನದಲ್ಲಿ ಮಾಡಲು ಆಗಲಿಲ್ಲ. ಈಗ ಸಿಎಂ ಗಮನಕ್ಕ ತಂದಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಾನು ಸಚಿವರಾದ ಡಾ.ಹೆಚ್. ಸಿ. ಮಹೇದವಪ್ಪ, ಮುನಿಯಪ್ಪ ಪ್ರಿಯಾಂಕಖರ್ಗೆ ಎಲ್ಲರೂ ಮನವಿ ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿಗಳು ಸಮುದಾಯದ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಮಾಡುವದಾಗಿ ಹೇಳಿದ್ದಾರೆ. ಸರ್ಕಾರಕ್ಕೆ ಒಳಮೀಸಲಾತಿ ಮಾಡಬಾರದು ಎಂಬ ಚಿಂತನೆ ಇಲ್ಲ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಎಲ್ಲರ ಜತೆ ಮಾತನಾಡಿ ಈ ಕೆಲಸ ಆಗಬೇಕಿದೆ. ಅದನ್ನು ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ ಎಂದರು.