ಬೆಳಗಾವಿ ಅಧಿವೇಶನದಲ್ಲಿ 371(ಜೆ) ಕಲಂ ನ್ಯೂನತೆ ಸರಿಪಡಿಸಲು ಸೈಬಣ್ಣಾ ಜಮಾದಾರ್ ಒತ್ತಾಯ

ಕಲಬುರಗಿ:ಡಿ.11: ಕಲ್ಯಾಣ ಕರ್ನಾಟಕಕ್ಕೆ ಜಾರಿಯಾಗಿರುವ 371(ಜೆ) ಕಲಂನಿನಲ್ಲಿನ ನ್ಯೂನತೆಗಳನ್ನು ಪ್ರಸ್ತುತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರಿಪಡಿಸಬೇಕು ಎಂದು ಅಹಿಂದ್ ಚಿಂತಕರ ವೇದಿಕೆಯ ಅಧ್ಯಕ್ಷ ಸೈಬಣ್ಣಾ ಜಮಾದಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಮೀಸಲಾತಿ ಸೌಲಭ್ಯವು ಜಾರಿಯಾಗಿ 11 ವರ್ಷಗಳು ಕಳೆದರೂ ಸಹ ಯಾವುದೇ ನ್ಯೂನತೆಗಳನ್ನು ಸರಿಪಡಿಸುತ್ತಿಲ್ಲ. ಈ ಕುರಿತು ರಾಜ್ಯಪಾಲರ ನಡೆಯೂ ಸಹ ಖಂಡನಾರ್ಹವಾಗಿದೆ ಎಂದು ಆಕ್ಷೇಪಿಸಿದರು.
ಕಲ್ಯಾಣ ಕರ್ನಾಟಕದಲ್ಲಿನ ಅಸಮಾನತೆ ನಿವಾರಣೆಗಾಗಿ 371(ಜೆ) ಕಲಂ ಜಾರಿಗೆ ತರಲಾಗಿದೆ. ಆದಾಗ್ಯೂ, ಅದರಲ್ಲಿನ ಅನೇಕ ನ್ಯೂನತೆಗಳಿಂದ ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವೂ ಸಹ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೇವಲ ಜನಪ್ರತಿನಿಧಿಗಳು ಆ ಅನುದಾನ ಲೂಟಿ ಹೊಡೆಯಲು ಮತ್ರ ಉಪಯೋಗ ಆಗುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
371(ಜೆ) ಕಲಂ ಜಾರಿಗೆ ಬಂದು 11 ವರ್ಷಗಳು ಆಗುತ್ತಿದ್ದರೂ ಸಹ ಇದುವರೆಗಿನ ಎಲ್ಲ ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರದೇ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಕಿಂಚಿತ್ತಾದರೂ ಆ ಕುರಿತು ಕಾಳಜಿ ಇದ್ದರೆ ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಗೃಹ ಮಂಡಳಿಯು ಹೊರಡಿಸಿದ ಆದೇಶದಂತೆ ಎಲ್ಲ ಇಲಾಖೆಗಳಲ್ಲಿಯೂ ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿ ಶೇಕಡಾ 8ರಷ್ಟು ನೇಮಕಾತಿ ಮತ್ತು ಮುಂಬಡ್ತಿ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಮೀಸಲಾತಿ ಒದಗಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕೇತರ 24 ಜಿಲ್ಲೆಗಳಲ್ಲಿಯೂ ಸಹ ಕಲ್ಯಾಣ ಕರ್ನಾಟಕದವರಿಗೆ ಶೇಕಡಾ 8ರಷ್ಟು ಮೀಸಲಾತಿ ಒದಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೈದ್ರಾಬಾದ್ ಕರ್ನಾಟಕ ವಿಶೇಷ ಕೋಶದ ಕಚೇರಿಯನ್ನು ಕಲಬುರ್ಗಿಯಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿದ ಅವರು, ಇತ್ತೀಚೆಗೆ 371(ಜೆ) ಕಲಂ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ವಿಶೇಷ ಕೋಶವನ್ನು ಕಲಬುರ್ಗಿಯಲ್ಲಿ ಆರಂಭಿಸಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದರು. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳನ್ನು ಕರೆಸಿ ವಿಮಾನ ನಿಲ್ದಾಣದಲ್ಲಿ ಸಭೆ ಮಾಡಿದ್ದಾರೆ. ಇದು ಸರಿಯಲ್ಲ. ಕೂಡಲೇ ಕಲಬುರ್ಗಿಯಲ್ಲಿ ವಿಶೇಷ ಕೋಶ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಏಕಕಾಲಕ್ಕೆ ಭರ್ತಿ ಮಾಡುವಂತೆ ಹಾಗೂ ಎಲ್ಲ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ ಅವರು, 371(ಜೆ) ಕಲಂನ ವ್ಯಾಜ್ಯಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಾರ್ಮಿಕ ನ್ಯಾಯ ಮಂಡಳಿಯ ಮಾದರಿಯಲ್ಲಿ 371(ಜೆ) ಕಲಂನ ವ್ಯಾಜ್ಯಗಳಿಗಾಗಿ ಸಂಚಾರಿ ಪೀಠವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಬೇಡಿಕೆಗಳನ್ನು ಬೆಳಗಾವಿಯ ಚಳಿಗಾಲದ ಉಳಿದ ನಾಲ್ಕು ದಿನಗಳ ಅಧಿವೇಶನದಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಸಚಿವರಿಗೆ ಹಾಗೂ ಶಾಸಕರ ವಿರುದ್ಧ ಪ್ರತಿಭಟನೆ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಜು ಹೊಡಲಕರ್, ಡಾ. ಅಂಬರೀಷ್, ಪ್ರಕಾಶ್ ಪಟ್ಟೇದಾರ್, ಸಂತೋಷ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.