ಬೆಳಗಾವಿಯಲ್ಲಿ ಬಸವೇಶ್ವರ ವಿಗ್ರಹ ಭಗ್ನಕ್ಕೆ ಖಂಡನೆ

ದೇವದುರ್ಗ.ನ.೧೧- ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಶ್ರೀಬಸವೇಶ್ವರ ಮೂರ್ತಿ ಭಗ್ನಿಗೊಳಿಸಿ ಅಪಮಾನ ಮಾಡಿರುವ ಘಟನೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂಭಾಗದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಮಹಾನ್ ವ್ಯಕ್ತಿಗಳ ವಿಗ್ರಹಗಳಿಗೆ ಕಿಡಿಗೇಡಿಗಳು ಅಪಮಾನ ಮಾಡುತ್ತಿರುವ ಘಟನೆ ಪದೇಪದೆ ನಡೆಯುತ್ತಿರುವುದು ಖಂಡನೀಯ. ಕಿಡಿಗಳ ವಿರುದ್ಧ ಪೊಲೀಸರು ಹಾಗೂ ಸರ್ಕಾರ ಕಠಿಣ ಕ್ರಮ ಜರುಗಿಸದ ಕಾರಣ ಇಂಥ ಘಟನೆಗಳು ಮರುಕಳಿಸುತ್ತಿವೆ. ಇದು ಮೂರ್ತಿಗಳಿಗೆ ಮಾಡಿದ ಅಪಮಾನವಲ್ಲ ವಿಶ್ವ ಮಾನವ ಕುಲಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಬಸವೇಶ್ವರ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು. ಸದರಿ ಸ್ಥಳದಲ್ಲಿ ಬಸವೇಶ್ವರ ಅವರ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಬೇಕು. ಬಸವೇಶ್ವರ ಸೇರಿ ವಿವಿಧ ವಿಗ್ರಹಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ, ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ, ತಹಸೀಲ್ದಾರ್ ಮಧುರಾಜ್ ಯಾಳಗಿಗೆ ಮನವಿ ಸಲ್ಲಿಸಿದರು.
ಇದನ್ನು ಮುನ್ನ ಬಸವೇಶ್ವರ ವೃತ್ತದಿಂದ ವಿವಿಧ ಬಡಾವಣೆ ಮೂಲಕ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ತಾಲೂಕು ಅಧ್ಯಕ್ಷ ಡಾ.ಕಿರಣ್‌ಕುಮಾರ ಖೇಣೇದ್, ಮಲ್ಲಣ್ಣ ಸಾಹುಕಾರ, ಅಮರಣ್ಣಗೌಡ ಗೌರಂಪೇಟೆ, ಪ್ರಕಾಶ ಖೇಣೇದ್, ದೊಡ್ಡರಂಗಯ್ಯ ಅಳ್ಳುಂಡಿ, ಶರಣಪ್ಪ ಪಡಶೆಟ್ಟಿ, ಶರಣಪ್ಪ ಬಳೆ, ಬಸವರಾಜಪ್ಪ ವಾರದ್, ರಂಗಣ್ಣ ಪಾಟೀಲ್ ಅಳ್ಳುಂಡಿ ಇತರರಿದ್ದರು.