ಬೆಳಗಾವಿಯಲ್ಲಿ ಡಿಕೆಶಿ ಮೊಕ್ಕಾಂ

ಬೆಂಗಳೂರು, ಮಾ. ೨೮- ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಗುದ್ದಾಟ, ಆರೋಪ, ಪ್ರತ್ಯಾರೋಪಗಳು ನಡೆದಿರುವಾಗಲೇ ಡಿ.ಕೆ. ಶಿವಕುಮಾರ್ ಇಂದು ಬೆಳಗಾವಿಗೆ ತೆರಳಿ ಅಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ.
ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿ ಅವರ ವಿರುದ್ಧ ಕಿಡಿಕಾರಿರುವಾಗಲೇ ಡಿ.ಕೆ. ಶಿವಕುಮಾರ್ ಅವರು ಯಾವುದಕ್ಕೂ ಜಗ್ಗದೆ ಇಂದು ಬೆಳಗಾವಿಗೆ ಭೇಟಿ ನೀಡಿ ನಾಳೆ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದು, ಸಾಥ್ ನೀಡುವರು.
ಇಂದು ಬೆಳಗಾವಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಸಂಜೆ ೭ ಗಂಟೆಗೆ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಹಿರಿಯ ನಾಯಕರುಗಳ ಜತೆ ಸಭೆ ನಡೆಸಿ ಚರ್ಚಿಸುವರು.
ಈ ಸಭೆಯ ನಂತರ ಬೆಳಗಾವಿಯಲ್ಲೇ ಉಳಿಯಲಿರುವ ಡಿ.ಕೆ. ಶಿವಕುಮಾರ್ ನಾಳೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರುವರು. ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸಹ ಉಪಸ್ಥಿತರಿರುವರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದಲ್ಲಿ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿದ್ದು, ರಮೇಶ್ ಜಾರಕಿಹೊಳಿ ನೇರವಾಗಿ ಸಿಡಿ ಷಡ್ಯಂತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರವಿದೆ ಎಂದು ಆರೋಪಿಸಿದ್ದರು. ಡಿ. ಕೆ. ಶಿವಕುಮಾರ್ ಈ ಆರೋಪಗಳನ್ನೆಲ್ಲಾ ತಳ್ಳಿ ಹಾಕಿದ್ದರು. ಇದೆಲ್ಲದರ ನಡುವೆಯೇ ರಮೇಶ್ ಜಾರಕಿಹೊಳಿ ಅವರ ತವರು ಜಿಲ್ಲೆ ಬೆಳಗಾವಿಗೆ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಹೆಸರು ಕೇಳಿ ಬಂದಿರುವುದರಿಂದ ಅವರು ಬೆಳಗಾವಿಗೆ ಬರುವುದು ಬೇಡ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅವರ ಉಪಸ್ಥಿತಿ ಬೇಕಿಲ್ಲ ಎಂದು ಸತೀಶ್ ಜಾರಕಿಹೊಳಿ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್‌ನ ಈ ಒಳಜಗಳ ನಾಳೆ ಯಾವ ರೂಪ ತಾಳುತ್ತದೋ ಹೇಳಲು ಬಾರದು.
ಸಿಡಿ ಪ್ರಕರಣ ದೊಡ್ಡ ಸದ್ದು ಮಾಡುತ್ತಿದ್ದರೂ ಕೆಪಿಸಿಸಿ ಅಧ್ಯಕ್ಷರು ಮಾತ್ರ ನಿರಂಮಳವಾಗಿ ಉಪಚುನಾವಣೆಗಳತ್ತ ಚಿತ್ತ ಹರಿಸಿದ್ದಾರೆ.
ನಾಳೆ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ನಂತರ ಶಿವಕುಮಾರ್ ಮಸ್ಕಿಗೆ ತೆರಳಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಲ್ಲಿಂದ ನಾಡಿದ್ದು ಮಾರ್ಚ್ ೩೦ ಬಸವಕಲ್ಯಾಣಕ್ಕೆ ತೆರಳಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರುವರು.