ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ,ಸೆ.೨೬- ವಿಧಾನಮಂಡಲದ ಈ ವರ್ಷದ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ ಬೆಳಗಾವಿಯ ಸರ್ಕೀಟ್‌ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ ಎಂದರು.
ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಬಂಧ ಸಚಿವಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿಯೂ ಅವರು ಹೇಳಿದರು.
ಕೊರೊನಾ ಕಾರಣದಿಂದ ಕಳೆದ ೨ ವರ್ಷಗಳಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಡೆದಿರಲಿಲ್ಲ. ಈ ವರ್ಷ ಬೆಳಗಾವಿಯಲ್ಲೇ ಅಧಿವೇಶನ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪ್ರವಾಸ ಸಂತ್ರಸ್ಥರಿಗೆ ಪರಿಹಾರ
ಬೆಳಗಾವಿಯಲ್ಲಿ ೨೦೧೯ರಲ್ಲಿ ಅತ್ಯಧಿಕ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಕೆಲ ಮನೆಗಳು ಕುಸಿದು, ಬಹಳಷ್ಟು ಮನೆಗಳಿಗೆ ಲುಕ್ಸಾನು ಆಗಿ, ಬೆಳೆಗಳಿಗೂ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಪೂರ್ಣ ಕುಸಿದ ಮನೆಗಳಿಗೆ ೫ ಲಕ್ಷ ರೂ, ಭಾಗಶಃ ಕುಸಿದ ಮನೆಗಳಿಗೆ ೨ ಲಕ್ಷ, ದುರಸ್ಥಿಗೆ ೧ ಲಕ್ಷ ಹೀಗೆ ಪರಿಹಾರ ನೀಡುವ ತೀರ್ಮಾನ ಮಾಡಿದ್ದರು. ಅದರಂತೆ ೪೪.೨೦೫ ಮನೆಗಳಿಗೆ ಪರಿಹಾರ ನೀಡುವ ಕೆಲಸ ನಡೆದಿದ್ದು, ಒಟ್ಟಾರೆ, ೮೬೪ ಕೋಟಿ ರೂ.ಗಳನ್ನು ಪರಿಹಾರಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮಳೆಯಿಂದ ಬೆಳೆ ಹಾನಿಗೂ ಪರಿಹಾರ ನೀಡಲಾಗಿದ್ದು, ಒಟ್ಟು ೧.೫೬ ಲಕ್ಷ ರೈತರಿಗೆ ೬೩ ಕೋಟಿ ರೂ. ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದರು.
ಕೆಲ ಕಾರಣಗಳಿಂದ ಪರಿಹಾರ ನೀಡಿಕೆಯಲ್ಲಿ ಕೆಲವರಿಗೆ ವಿಳಂಬವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲಿ
ಜಿಲ್ಲಾದಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮುಂದಿನ ವಾರ ಜಿಲ್ಲಾಧಿಕಾರಿಗಳನ್ನು ಕರೆಸಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಎಲ್ಲರಿಗೂ ಪರಿಹಾರ ನೀಡುವುದಾಗಿ ಹೇಳಿದರು.
ಕಚೇರಿಗಳ ಸ್ಥಳಾಂತರ
ಮುಂದಿನ ವಿಧಾನಮಂಡಲದ ಅಧಿವೇಶನದೊಳಗೆ ಬೆಳಗಾವಿಯ ಸುವರ್ಣಸೌಧಕ್ಕೆ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಸಕ್ಕರೆ ನಿರ್ದೇಶನಾಲಯದ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿದೆ. ಅ. ೩ ರಿಂದ ಸಕ್ಕರೆ ನಿರ್ದೇಶನಾಲಯ ಬೆಳಗಾವಿಯಿಂದಲೇ ಕಾರ್ಯ ನಿರ್ವಹಿಸಲಿದೆ ಎಂದರು.
ಕಬ್ಬು ಬೆಳೆಗಾರರ ಬಾಕಿ ಹಣವನ್ನು ಕೊಡಿಸಲು ಸೂಚಿಸಲಾಗಿದೆ. ನಿನ್ನೆ ಸಾವರಿನ್ ಖಾಸಗಿ ಸಕ್ಕರೆ ಕಾರ್ಖಾನೆಯ ಬಾಕಿಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರು ತಮ್ಮನ್ನು ಭೇಟಿ ಮಾಡಿದ್ದರು. ಈ ಕಾರ್ಖಾನೆಗೆ ಖಾಸಗಿಯವರದ್ದ್ದು, ಅವರೇ ಹಣವನ್ನು ಭರಿಸಬೇಕು. ಬಾಕಿ ಇರುವ ಹಣವನ್ನು ಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.
ಕಬ್ಬು ಬೆಳೆಗಾರರಿಗೆ ಬಾಕಿ ಹಣ ಕೊಡದಿದ್ದರೆ ಕಾನೂನಾತ್ಮಕ ಕ್ರಮ ಜರುಗಿಸುವುದಾಗಿಯೂ ಅವರು ಹೇಳಿ, ರೈತರಿಗೆ ಎಲ್ಲ ರೀತಿಯ ಸಹಾಯ ಮಾಡುವಂತೆ ಸಕ್ಕರೆ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮುಂಬೈ-ಕರ್ನಾಟಕ ಪ್ರದೇಶವನ್ನು ಕಿತ್ತೂರ ಕರ್ನಾಟಕ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ರಾಜ್ಯಪ್ರವಾಸ ನಿರಾತಂಕವಾಗಿ ನಡೆಯಲಿದೆ. ಈ ಬಗ್ಗೆ ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಮಾತನಾಡಿದ್ದಾರೆ ಎಂದರು.
ರಾಜ್ಯದ ಹಲವೆಡೆ ಮಕ್ಕಳಿಗೆ ವೈರಲ್ ಹಾಗೂ ಡೆಂಗೆ ಜ್ಬರ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದೇವೆ. ಹಾಗೆಯೇ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೂ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಕ್ಕಳ ಆರೋಗ್ಯ ತಪಾಸಣೆಗೆ ಆರೋಗ್ಯ ಶಿಬಿರವನ್ನು ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ ಎಂದರು.
ತಮ್ಮ ಬೆಳಗಾವಿ ಪ್ರವಾಸ ಸಂದರ್ಭದಲ್ಲಿ ಗೈರು ಹಾಜರಾಗುವ ಬಗ್ಗೆ ಶಾಸಕ ಬಾಲಚಂದ್ರ ಜಾರಿಕಿಹೊಳಿ ಪತ್ರ ಬರೆದು ತಿಳಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಗಡಿ ಸಂರಕ್ಷಣೆಗೆ ಪ್ರತ್ಯೇಕ ಸಚಿವರನ್ನು ನೇಮಿಸುವ ಪ್ರಸ್ತಾಪ ಸದ್ಯಕ್ಕೆ ಇಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನೇ ಮತ್ತಷ್ಟು ಬಲ ತುಂಬಲಾಗುವುದು ಎಂದರು.

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ೨ಎ ಪ್ರವರ್ಗಕ್ಕೆ ಸೇರಿಸುವ ಸಂಬಂಧ ರಚಿಸಲಾಗಿರುವ ಸಮಿತಿ ವರದಿ ನೀಡಿದ ತಕ್ಷಣ ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ೨ಎ ಪ್ರವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪಂಚಮಸಾಲಿ ಸ್ವಾಮಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿರುವುದು ತಮ್ಮ ಗಮನದಲ್ಲಿದೆ. ಸ್ವಾಮೀಜಿಗಳ ಜತೆ ಸಂಪರ್ಕದಲ್ಲಿದ್ದೇನೆ. ಇಂದು ಅವರ ಜತೆ ಮತ್ತೆ ದೂರವಾಣಿಯಲ್ಲಿ ಮಾತನಾಡುತ್ತೇನೆ. ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯದ ಮುಖ್ಯಮಂತ್ರಿಯಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ಕ್ಷಿಪ್ರಗತಿಯಲ್ಲಿ ಟೇಕಾಫ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾದ ನಂತರ ಎಲ್ಲರೂ ಸರ್ಕಾರ ಟೇಕಾಫ್ ಆಗಿ ಬಹಳ ದಿನ ಆಗಿದೆ ಎಂದು ಹೇಳಿದ್ದಾರೆ. ಯಾರೋ ಕೆಲವರು ರಾಜಕೀಯ ಕಾರಣದಿಂದಾಗಿ ಈ ರೀತಿ ಮಾತನಾಡಿರಬಹುದು. ಜನಸಾಮಾನ್ಯರ ಧ್ವನಿ ಬಹಳ ಮುಖ್ಯ. ತಾವು ಹೋದೆಡೆಯಲ್ಲ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಬಂದಿದೆ. ಸರ್ಕಾರ ಟೇಕಾಫ್ ಆಗಿ ಎಷ್ಟೋ ದಿನಗಳಾಗಿ ಹೋಗಿವೆ ಎಂದರು.