ಬೆಳಗಾವಿಯಲ್ಲಿ ಕೊರೊನಾ ಲಸಿಕೆ ಡ್ರೈರನ್ ಆರಂಭ

ಬೆಳಗಾವಿ,ಜ2:ದೇಶಾದ್ಯಂತ ಇಂದು ಕೊರೊನಾ ಲಸಿಕೆ ಡ್ರೈರನ್ ಆರಂಭಿಸಲಾಗಿದ್ದು, ಬೆಳಗಾವಿ ಜಿಲ್ಲೆಯ 3 ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಡ್ರೈರನ್ ಆರಂಭವಾಗಿದೆ.
ಮೊದಲು ಹತ್ತು ಜನರ ಮೇಲೆ ಲಸಿಕೆ ಡೆಮೊ ಮಾಡಲು ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದು. ವಂಟಮೂರಿ ನಗರ ಪ್ರಾಥಮಿಕ ಶಾಲೆಯಲ್ಲಿ ಮೊದಲಿಗೆ ಆಶಾ ಕಾರ್ಯಕರ್ತೆ ಮೇಲೆ ಪ್ರಥಮವಾಗಿ ಡೆಮೊ ಮಾಡಲಾಯಿತು.
ಬೆಳಗಾವಿಯ ವಂಟಮುರಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಮಾದರಿ ಕೊರೊನಾ ಲಸಿಕಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕೋವಿಡ್ ಆಪ್‍ನಲ್ಲಿ ನೋಂದಣಿ ಮಾಡಿಸಿದ 25 ಜನರಿಗೆ ಡ್ರೈ ರನ್ ಮಾಡಲಾಗಿದ್ದು, ಬೆಳಗಾವಿ ಜಿಲ್ಲೆಯ ಒಟ್ಟು 28,195 ಆರೋಗ್ಯ ಕಾರ್ಯಕರ್ತರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಒಂದು ಘಂಟೆಯಲ್ಲಿ ಕೇವಲ 10 ಜನರಿಗೆ ಮಾತ್ರ ವ್ಯಾಕ್ಸಿನೇಷನ್ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ತಾಲೂಕು ವೈದ್ಯಾಧಿಕಾರಿ ಸಂಜಯ್ ಡುಮ್ಮಗೋಳ ನೇತೃತ್ವದಲ್ಲಿ ಲಸಿಕೆ ನೀಡಲು ಆರಂಭವಾಗಿದ್ದು, ಓರ್ವ ಆಶಾ ಕಾರ್ಯಕರ್ತೆ ಮೇಲೆ ಮೊದಲು ಡೆಮೊ ಮಾಡಲಾಯಿತು. ನಂತರ ಇನ್ನುಳಿದವರಿಗೂ ಇಂಜಕ್ಷನ್ ನೀಡಲಾಯಿತು.
ಈ ಬಗ್ಗೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಈಶ್ವರ ಗಡಾದ ಅವರು ಮಾತನಾಡಿ ಕೊರೊನಾ ಲಸಿಕೆ ಶೀಘ್ರವೇ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಕೊರೊನಾ ವ್ಯಾಕ್ಸಿನ್‍ನ್ನು ಯಾವ ರೀತಿ ಕೊಡಬೇಕು ಎಂಬ ಕುರಿತು ಒಂದು ಟ್ರೈಯಲ್ ಮಾಡುತ್ತಿದ್ದೇವೆ. ಲಸಿಕೆ ಬಂದ ನಂತರ ಯಾವ ರೀತಿ ಮಾಡಲಾಗುತ್ತದೆ ಎಂಬ ಕುರಿತು ಅಣುಕು ಪ್ರದರ್ಶನ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕೊವ್ಯಾಕ್ಸಿನ್ ತೆಗೆದುಕೊಳ್ಳಲು ಆಗಮಿಸಿದ್ದ ನರ್ಸ್ ಒಬ್ಬರು ಮಾತನಾಡಿ ಆಧಾರ್ ಕಾರ್ಡ, ಪ್ಯಾನ್ ಕಾರ್ಡ್ ತೆಗೆದುಕೊಂಡು ಆನ್‍ಲೈನ್‍ನಲ್ಲಿ ಅರ್ಜಿ ಹಾಕಿದ್ದೇವು. ಸಾಮಾಜಿಕ ಅಂತರದ ಮೂಲಕ ಆಗಮಿಸಿ ಮುಂಜಾಗ್ರತಾ ಕ್ರಮಗಳೊಂದಿಗೆ ಇಂಜೆಕ್ಷನ್ ತೆಗೆದುಕೊಂಡಿದ್ದೇವೆ. ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಸಂಗೀತಾ ಬಸವಣೆಪ್ಪ ಕೂಪಾಟೆ ಮಾತನಾಡಿ ಆರಂಭದಲ್ಲಿ ನಮಗೆ ಏನು ಮಾಡುತ್ತಾರೆ ಎಂದು ಅಂಜಿಕೆ ಆಗಿತ್ತು. ಈಗ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜಕ್ಷನ್ ಕೊಟ್ಟ ಬಳಿಕ ರೂಮ್‍ನಲ್ಲಿ ಕೂಡ್ರಿಸಿದ್ದಾರೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಮೊದಲು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿರುವ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಡೆಮೊ ಮಾಡಲಾಗುತ್ತಿದ್ದು. ಅತ್ಯಂತ ವ್ಯವಸ್ಥಿತವಾಗಿ ಕೋವಿಡ್ ನಿಯಮ ಅನುಸಾರ ವ್ಯಾಕ್ಸಿನ್ ಡ್ರೈರನ್ ಮಾಡುತ್ತಿರುವುದು ಕಂಡು ಬಂತು.