ಬೆಳಗಾವಿಗೆ ಪ್ರಧಾನಿ ಮೋದಿ

ಬೆಳಗಾವಿ, ಫೆ.೨೭- ಕುಂದಾನಗರಿ ಬೆಳಗಾವಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿಗಳ
ಸ್ವಾಗತಕ್ಕೆ ನಗರವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ.
ಶಿವಮೊಗ್ಗದಿಂದ ಇಂದು ಮಧ್ಯಾಹ್ನ ೨.೩೦ಕ್ಕೆ ಬೆಳಗಾವಿಗೆ ಆಗಮಿಸುವ ಮೋದಿ ಅವರು ರೋಡ ಶೋ ನಡೆಸಲಿದ್ದಾರೆ. ನಂತರ ೩.೧೫ಕ್ಕೆ ಮಾಲಿನಿ ಸಿಟಿ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಪ್ರಧಾನಿಗಳು ಬೆಳಗಾವಿ ರೈಲು ನಿಲ್ದಾಣ ಲೋಕಾರ್ಪಣೆ ಮಾಡುವುದರ ಜೊತೆಗೆ ಆರು ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೂ ಶಿಲಾನ್ಯಾಸ ನೆರವೇರಿಸುವರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕಿಸಾನ್ ಸಮ್ಮಾನ್ ಯೋಜನೆಯ ೧೩ ನೇ ಕಂತಿನ ಅನುದಾನವನ್ನು ದೇಶದ ಸುಮಾರು ೯ ಕೋಟಿ ಅರ್ಹ ರೈತರಿಗೆ ಡಿಬಿಟಿ ಮೂಲಕ ನೇರವಾಗಿ ಬಿಡುಗಡೆ ಮಾಡಲಿದ್ದಾರೆ.
ಬಿಗಿ ಭದ್ರತೆ: ಪ್ರಧನಿ ಮೋದಿ ಅವರು ಭಾಗವಹಿಸುವ ರೋಡ್ ಶೋ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ರೋಡ್ ಶೋ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅಳವಡಿಸಲಾಗಿದ್ದು, ಭದ್ರತೆಗಾಗಿ ೪,೫೦೦ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.