ಬೆಳಗಲ್ಲು ವೀರಣ್ಣ ಅದ್ಭುತ ಕಲಾಧೀಮಂತ: ರಂಗತೋರಣ ಸಂತಾಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03: ನಾಡಿನ ಅಪೂರ್ವ ಕಲಾವಿದ ಬೆಳಗಲ್ಲ ವೀರಣ್ಣ ಅವರ ಹಠಾತ್ ನಿಧನ ಕಲಾ ಜಗತ್ತಿಗೆ ಆಘಾತ ತಂದಿದೆ ಎಂದು ನಗರದ  ರಂಗತೋರಣ ಸಂಸ್ಥೆ ಸಂತಾಪ ಸೂಚಿಸಿದೆ.
ನಗರದ ರಾಘವ ಕಲಾ ಮಂದಿರದಲ್ಲಿ  ನಿನ್ನೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು. ಬೆಳಗಲ್ಲು ವೀರಣ್ಣ ನವರ ಭಾವಚಿತ್ರಕ್ಕೆ ನಾಡಿನ ಹೆಸರಾಂತ ರಂಗಕರ್ಮಿಗಳು ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು. ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯ್ತು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ ರಾಜಪ್ಪ ದಳವಾಯಿ ಬೆಳಗಲ್ಲು ವೀರಣ್ಣನವರು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಎರಡೂ ಪ್ರಕರಣಗಳಲ್ಲಿ ಮೇಲುಗೈ ವೃತ್ತಿಕಲಾರಂಗದ ಅದ್ಭುತ ಪ್ರತಿಭೆ ತೋಗಲುಗೊಂಬೆಯಂತಹ ನಿರ್ಲಕ್ಷಿತ ಕಲೆಯನ್ನು ಪುರಾಣ ಕಥೆಗಳೊಂದಿಗೆ ಬುಧ್ಧ,ಬಸವ,ಗಾಂಧಿ,ಸ್ತನಪಾನ, ಏಡ್ಸ್ ಜಾಗೃತಿ ಮುಂತಾದ ಸಾಮಾಜಿಕ ಜಾಗೃತಿ ಕಾರ್ಯಗಳಿಗೂ ಬೆಳೆಸಿದ್ದ ಅಪರೂಪದ ಕಲಾವಿದ ಹಾಗೆಯೇ ಅದಕ್ಕಾಗಿ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆಂದರು.
ಇತ್ತಿಚೆಗೆ ರಾಜ್ಯಮಟ್ಟದ ಬಿ ವಿ ಕಾರಂತ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಸಾಬ್, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಾಬಣ್ಣ ಕಲ್ಮನಿ,ಜಕಣ್ಣಚಾರಿ ಪ್ರಶಸ್ತಿ ಪುರಸ್ಕೃತ ಹಂಪಿ ವಿಶ್ವವಿದ್ಯಾಲಯದ ಡಿ ಹುಸೇನ್ ಅವರೂ ಕೂಡಾ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮೃತರ ಸ್ಮರಣೆ ಮಾಡಿದರು.
ರಂಗತೋರಣ ಅಧ್ಯಕ್ಷ ಪ್ರೊ. ಆರ್ ಭೀಮಸೇನ ರಂಗತೋರಣ ಹಾಗೂ ಬೆಳಗಲ್ಲು ವೀರಣ್ಣ ಅವರ ಅನನ್ಯ ಸಂಬಂಧವನ್ನು ನೆನಪು ಮಾಡಿಕೊಟ್ಟರು.  ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಅವರು ನುಡಿ ಸ್ಮರಣೆ ಸಲ್ಲಿಸಿ ನಾಡೋಜ ಪದವಿಗೆ ಸಾರ್ಥಕತೆ ತಂದವರೆಂದರು. ಅಲ್ಲಂ ವೀರಭದ್ರಪ್ಪ,  ಆಶುಕವಿ ಖಾಸಿಂ ಸಾಬ್ ಅವರು ಸಹ ನುಡಿ ನಮನ ಸಲ್ಲಿಸಿದರು. ನಾಗರಿಕರು, ಕಲಾವಿದರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಸಹಕಾರ್ಯದರ್ಶಿ ಅಡವಿಸ್ವಾಮಿ ಸಂತಾಪ ಸೂಚಿಸಿದರು.