ಬೆಳಗಲ್ಲು ವೀರಣ್ಣನವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಲಭಿಸಲಿ: ಟಿಎಚ್‍ ಎಂ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಏ.9- ಅತ್ಯಂತ ಸರಳ ಜೀವಿ, ಮೇರು ಕಲಾವಿದ ಬೆಳಗಲ್ಲು ವೀರಣ್ಣನವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಕರ್ನಾಟಕ ಇತಿಹಾಸ ಅಕಾಡಮಿಯ ಜಿಲ್ಲಾಧ್ಯಕ್ಷ  ಟಿ.ಎಚ್‍.ಎಂ. ಬಸವರಾಜ  ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅವರು ನಿನ್ನೆ ಸಂಜೆ  ನಗರದ ಸ್ನೇಹ ಸಂಪುಟದಲ್ಲಿ ರೂಪನಗುಡಿಯ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನಾಡೋಜ ಬೆಳಗಲ್ಲು ವೀರಣ್ಣನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೆಳಗಲ್ಲು ವೀರಣ್ಣನವರ ವ್ಯಕ್ತಿತ್ವ ಮುಗಿದ ಕೈ, ಬಾಗಿದ ತಲೆ. ಸಾವು ಬಂದಾಗ ನಾವಿರುವುದಿಲ್ಲ. ನಾವಿರುವವರೆಗೆ ಸಾವು ಬರುವುದಿಲ್ಲ ಎಂದು ಹೇಳಿದ  ಮೇರು ಕಲಾವಿದರಾಗಿದ್ದರೆಂದರು.
ಸ್ನೇಹ ಸಂಪುಟದ ಅಧ್ಯಕ್ಷ ಕಲ್ಲುಕಂಬ ಪಂಪಾಪತಿ  ಮಾತನಾಡಿ, ಶ್ರೇಷ್ಠ ಕಲಾವಿದರಾದ ಬೆಳಗಲ್ಲು ವೀರಣ್ಣ ಅವರ ನೆನಪಿಗಾಗಿ ನಗರದ ಯಾವುದಾದರೂ ವೃತ್ತ ಅಥವಾ ರಸ್ತೆಗೆ ಅವರ ಹೆಸರು ಇಡಬೇಕು ಎಂದರು.
ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಮಾತನಾಡಿ, ಬೆಳಗಲ್ಲು ವೀರಣ್ಣನವರು ದುರ್ಯೋಧನರಾಗಿ, ತಮ್ಮ ತಂದೆ ಕೃಷ್ಣನ ಪಾತ್ರಧಾರಿಗಳಾಗಿ ನಟನೆ ಮಾಡುತ್ತಿದ್ದರು. ನಾವು ಬಾಲ್ಯದಲ್ಲಿದ್ದಾಗ ಅವರ ಅಭಿನಯದ ದಿಗ್ದರ್ಶನ ಕಂಡು ಪುಳಕಿತರಾಗುತ್ತಿದ್ದೆವು. ಇವರ ಸ್ಮರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದರು. 
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, ಬೆಳಗಲ್ಲು ವೀರಣ್ಣನವರು ಪ್ರಶಸ್ತಿಗಳಿಗೆ ಅತೀತರಾದವರು. ಜನಸಾಮಾನ್ಯರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಮೇರು ಕಲಾವಿದ ಬೆಳಗಲ್ಲು ವೀರಣ್ಣನವರು ದೊಡ್ಡ ಸಾಧನೆ ಮಾಡಿ ನಿರ್ಗಮಿಸಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಅಕಾಡೆಮಿ ಸ್ಥಾಪಿಸಬೇಕು ಎಂದರು.
ಮಹಾರಾಷ್ಟ್ರದ ಮಾಜಿ ಸಚಿವ ವಸಂತರಾವ್ ಮುಕ್ಕೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕಲಾವಿದ ರಮೇಶಗೌಡ ಪಾಟೀಲ್, ಅಭಿನಯ ಕಲಾ ಕೇಂದ್ರದ ಅಧ್ಯಕ್ಷ ಕೆ.ಜಗಧೀಶ್, ಕಲಾವಿದ ಹಂದ್ಯಾಳು ಪುರುಷೋತ್ತಮ, ವೀಣಾ ಆದವಾನಿ, ಮಂಜುನಾಥ ಸೇರಿದಂತೆ ಬೆಳಗಲ್ಲು ವೀರಣ್ಣನನವರ ಅಭಿಮಾನಿಗಳು, ಹಿತೈಷಿಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಯಲಾಟ ಪರಿಷತ್ ಅಧ್ಯಕ್ಷ ನಾಗನಗೌಡ, ನಾಟಕ ಅಕಾಡೆಮಿ ಸದಸ್ಯ ತಿಪ್ಪೇಸ್ವಾಮಿ, ರಕ್ಷಣಾ ವೇದಿಕೆಯ ಶೇಖರ್, ಕಲಾವಿದರಾದ ಅಣ್ಣಾಜಿ ಕೃಷ್ಣಾರೆಡ್ಡಿ, ಹುಲುಗಣ್ಣ, ಈಡಿಗ ಸಮುದಾದಯ ಟಿ.ಸುನೀಲ್ ಕುಮಾರ್, ಅಮರೇಗೌಡ, ಪರಮೇಶ್, ವಕೀಲ ಚಂದ್ರಪ್ಪ, ಚಲುವಾದಿ ಅಂಬರೀಷ್, ಬಸವರಾಜ ಬಿಸಿಲಹಳ್ಳಿ, ಸಮಾಜ ಸೇವಕಿ ಶೈಲಜಾ ಪಾಚಂಗಿ, ರಾಧಾಕೃಷ್ಣ ಶಿಳ್ಳೆಕ್ಯಾತರ್ ಸೇರಿದಂತೆ ಇನ್ನಿತರರು ಇದ್ದರು. ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷ ಸುಬ್ಬಣ್ಣ ಸ್ವಾಗತಿಸಿ, ವಂದಿಸಿದರು. ಕಲಾವಿದ ವೀರೇಶಸ್ವಾಮಿ ನಿರೂಪಿಸಿದರು. ಕುಮಾರಿ ಅಭಿನಯ  ರಂಗ ಗೀತೆಯನ್ನು ಹಾಡಿದರು.

One attachment • Scanned by Gmail