
ಬೀದರ್:ಆ.2: ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸೋಮವಾರ ರಾತ್ರಿ ಮತ್ತೆ 3 ಜನ ಅಸ್ವಸ್ಥರಾಗಿದ್ದು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
16 ಜನ ಗುಣಮುಖರಾಗಿದ್ದು, 8 ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಆಸ್ಪತ್ರೆಯಲ್ಲಿ 4 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ವಿಜಯ ಹಿರಾಸ್ಕರ್ ತಿಳಿಸಿದ್ದಾರೆ.
ಗ್ರಾಮದ ಬಸವನಗರದ ಕೊಳವೆ ಬಾವಿ ಸುತ್ತಲು ಕಲುಷಿತ ವಾತಾವರಣ ನಿರ್ಮಾಣವಾಗಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮಳೆಯ ನೀರು ಕೊಳವೆ ಬಾವಿ ಸುತ್ತಲು ಸಂಗ್ರಹವಾಗಿ ಬಾವಿ ನೀರಿನೊಂದಿಗೆ ಬೆರೆತಿದೆ. ನಾಗರಿಕರು ಆ ನೀರು ಕುಡಿದಿದ್ದಕ್ಜೆ ಅಸ್ವಸ್ಥರಾಗಿದ್ದಾರೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಮ ಪಾಶಾ ಮಾಹಿತಿ ನೀಡಿದ್ದಾರೆ.
ಶಾಸಕ ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದು. ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿಗೆ ಗ್ರಾಮದೆಲ್ಲೆಡೆ ಸ್ವಚ್ಛತೆ ಕಾಪಾಡಲು ಸೂಚಿಸಿದರು.
ಸದ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು,ನಾಗರಿಕರಿಗೆ ಕುಡಿಯುವ ನೀರು ಕಾಯಿಸಿ ಆರಿಸಿ ಕುಡಿಯಲು ಸೂಚಿಸಲಾಗಿದೆ. ಕೊಳವೆ ಬಾವಿಯ ನೀರು ಪ್ರಯೋಗಾಲಯ ಕಳಿಸಲಾಗಿದೆ. ವರದಿ ಬರುವವರೆಗೂ ತಾತ್ಕಾಲಿಕವಾಗಿ ಕೊಳವೆ ಬಾವಿ ನೀರು ಬಳಕೆ ತಡೆಯಲಾಗಿದೆ. ಪಂಚಾಯತಿ ಪಿಡಿಒ ಹಾಗೂ ಇತರ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗಿದೆ ಎಂದು ಮಹಮ್ಮದ್ ಅಕ್ರಮ ಪಾಶಾ ತಿಳಿಸಿದ್ದಾರೆ.