ಕೋಲಾರ,ಮಾ,೨೯- ಸಮಾಜದಲ್ಲಿನ ಯುವಕರು ದಾರಿತಪ್ಪದಂತೆ ಅವರಿಗೆ ಸರಿಮಾರ್ಗ ತೋರುವುದರ ಜತೆಗೆ ಶಿಕ್ಷಣ, ಉದ್ಯೋಗ,ಆರ್ಥಿಕ ನೆರವು ಒದಗಿಸುವ ನಿಸ್ವಾರ್ಥತೆಯಿಂದ ಆರಂಭಗೊಂಡಿರುವ ‘ಬೆಳಕು ಪರಿವಾರ’ ಮಾಲೂರು ತಾಲ್ಲೂಕಿನ ಯುವಕರ ಬಾಳಿನ ಕತ್ತಲು ಹೋಗಲಾಡಿಸುವ ಬೆಳಕಾಗಲಿ ಎಂದು ಬೆಂಗಳೂರು ಉತ್ತರ ಡಿಸಿಪಿ ಡಿ.ದೇವರಾಜ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಮಾಲೂರು ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ನಿನ್ನೆ ಸಾಮಾಜಿಕ ಸೇವೆಗಾಗಿಯೇ ತಲೆಯೆತ್ತಿರುವ ಯುವಕರ ನಾಯಕತ್ವದ ‘ಬೆಳಕು ಪರಿವಾರ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹೆಸರೇ ಸೂಚಿಸುವಂತೆ ಕತ್ತಲು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದೀರಿ, ನಿಮ್ಮ ಪ್ರಯತ್ನದಲ್ಲಿ ಬದ್ದತೆ ಇರಲಿ ಎಂದು ಕಿವಿಮಾತು ಹೇಳಿದ ಅವರು, ನೀವು ಪ್ರತಿ ವರ್ಷ ಎಷ್ಟು ಮಂದಿ ಯುವಕರಿಗೆ ಉದ್ಯೋಗ ಕೊಡಿಸಿದ್ದೀರಿ, ಶೈಕ್ಷಣಿಕ ನೆರವು, ಹಾಸ್ಟೆಲ್ ಸೌಲಭ್ಯ,ಕೋಚಿಂಗ್ ಸೇರಿದಂತೆ ಸಾಮಾಜಿಕ ಕಾರ್ಯಗಳನ್ನು ಪಟ್ಟಿ ಮಾಡಿ ನೀಡಿ, ನಿಮ್ಮೊಂದಿಗೆ ಸದಾ ನಾನಿರುವೆ ಅಗತ್ಯ ಸಹಕಾರ ಒದಗಿಸುವೆ ಎಂದು ಭರವಸೆ ನೀಡಿದರು.
ಕೋಲಾರದಲ್ಲಿ ಶಿಕ್ಷಕ ಗೆಳೆಯರ ಬಳಗದಂತೆ ನಿಸ್ವಾರ್ಥವಾಗಿ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವ ತುಡಿತ ನಿಮಗೆ ಆದರ್ಶವಾಗಲಿ ಅದೇ ಮಾದರಿಯಲ್ಲೇ ನಿಮ್ಮ ಬೆಳಕು ಪರಿವಾರ ಕೆಲಸ ಮಾಡಿದರೆ ನಾನು ನಿಮ್ಮೊಂದಿಗೆ ಇರುವೆ ಎಂದರು.
ಯುವಕರನ್ನು ದುಶ್ಚಟಗಳಿಗೆ ದಾಸರಾಗದಂತೆ ತಡೆಯುವ ಕೆಲಸ ಮಾಡುವ ನಿಮ್ಮ ಧ್ಯೇಯ ಶ್ಲಾಘನೀಯವಾಗಿದ್ದು, ಇದರಿಂದ ಅಪರಾಧಗಳ ಸಂಖ್ಯೆಯೂ ಕಡಿಮೆಯಾಗಲಿದೆ, ಸಮಾಜದಲ್ಲಿ ಶಾಂತಿ,ನೆಮ್ಮದಿ ನೆಲಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟು, ಬೆಳಕು ಪರಿವಾರಕ್ಕೆ ಶುಭ ಕೋರಿದರು.
ಯುವಕರ ಬಾಳಿನ ಕತ್ತಲು ಕರಗಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ‘ಬೆಳಕು ಪರಿವಾರ’ ಹೆಸರೇ ಅತ್ಯಂತ ಅದ್ಬುತವಾಗಿದೆ, ಇಂದು ಯಾವುದ್ಯಾವುದೋ ದುರುದ್ದೇಶದಿಂದ ಸಂಘಟನೆಗಳು ತಲೆಯೆತ್ತುತ್ತಿರುವುದನ್ನು ಕಂಡಿದ್ದೇವೆ ಆದರೆ ನಿಮ್ಮ ಈ ಪ್ರಯತ್ನ ನಿಸ್ವಾರ್ಥತೆಯಿಂದ ಕೂಡಿದ್ದು, ಇತರರಿಗೆ ಆದರ್ಶವಾಗಿದೆ ಎಂದರು.
ಯಾವುದೇ ರಾಜಕಾರಣಿಯ ಆಸರೆ ಬಯಸದೇ ಕೇವಲ ಉದ್ಯಮಿಗಳು ಡಿಸಿಪಿ ದೇವರಾಜ್ ಅವರಂತಹ ಸಮಾಜಮುಖಿ ಅಧಿಕಾರಿಗಳ ಆದರ್ಶವನ್ನು ಹೊಂದಿ ನೀವು ಕೆಲಸಕ್ಕೆ ಕೈಹಾಕಿದ್ದೀರಿ, ನಿಮ್ಮ ಪ್ರಯತ್ನದಿಂದ ಮಾಲೂರು ತಾಲ್ಲೂಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ, ನಿಮ್ಮೆಲ್ಲಾ ಬದ್ದತೆಯ ಪ್ರಯತ್ನಗಳಿಗೆ ನೌಕರರ ಸಂಘ ಹಾಗೂ ವೈಯಕ್ತಿಕವಾಗಿ ನಾನೂ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.