ಬೆಳಕು ಅರಿವಿನ ಮೂಲ : ರಂಭಾಪುರಿ ಶ್ರೀ

 ಚನ್ನಗಿರಿ ನ.೭;  ದೀಪದಲ್ಲಿ ಬೆಂಕಿ ಬೆಳಕು ಎರಡೂ ಇವೆ. ದೀಪದಲ್ಲಿ ಬೆಳಕು ಕಾಣಬೇಕಲ್ಲದೆ ಬೆಂಕಿ ಕಾಣಬಾರದು. ಬೆಳಕು ಜ್ಞಾನದ ಅರಿವಿಗೆ ಮೂಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ತಾಲೂಕಿನ ದೊಡ್ಡಬ್ಬೀಗೆರೆ ಗ್ರಾಮದಲ್ಲಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಹೊರಗಿನ ಕತ್ತಲೆಯನ್ನು ಸೂರ್ಯ ಕಳೆಯಬಲ್ಲ. ಒಳಗಿರುವ ಅಜ್ಞಾನ ಎಂಬ ಕತ್ತಲೆಯನ್ನು ಗುರು ಕಳೆಯಬಲ್ಲ. ಶಿವ ಪಥವನರಿಯಲು ಗುರು ಪಥ ಮೊದಲು ಎಂಬುದನ್ನು ಮರೆಯಬಾರದು. ಸಂಸ್ಕಾರ ಸಂಸ್ಕೃತಿ ಸದಾಚಾರದಿಂದ ಬದುಕು ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ. ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಗೆ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು. ಕ್ಷಣಿಕ ಸುಖಕ್ಕಾಗಿ ಶಾಶ್ವತವಾಗಿ ಫಲ ಕೊಡುವ ಮೌಲ್ಯಗಳನ್ನು ನಿರ್ಲಕ್ಷಿಸಬಾರದು. ಮನುಷ್ಯನಲ್ಲಿ ವೈಚಾರಿಕತೆ ಸುಧಾರಣೆ ಬೆಳೆದು ಬರಲಿ. ಆದರೆ ನಾಸ್ತಿಕ ಮನೋಭಾವ ಯಾವತ್ತೂ ಬೆಳೆಯಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮೌಲ್ಯಾಧಾರಿತ ಜೀವನ ದರ್ಶನ ಸಿದ್ಧಾಂತವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಬೆಳೆಯುವ ಯುವ ಜನಾಂಗದಲ್ಲಿ ಸಂಸ್ಕಾರ, ಸದ್ವಿಚಾರ, ಕರ್ತವ್ಯಶೀಲತೆ, ಪ್ರಾಮಾಣಿಕತೆ ಮತ್ತು ದೇಶಾಭಿಮಾನ ಬೆಳೆಸುವ ಮಹತ್ಕಾರ್ಯವಾಗಬೇಕು. ದೊಡ್ಡಬ್ಬೀಗೆರೆ ಸಮಸ್ತ ಜನರು ಭಕ್ತಿ ಶ್ರದ್ಧೆಯಿಂದ ಎರಡನೇ ಸಲ ಬರಮಾಡಿಕೊಂಡು ಧರ್ಮ ಸಮಾರಂಭ ನಡೆಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.  ಶಾಸಕ ಮಾಡಾಳ ವಿರೂಪಾಕ್ಷಪ್ಪನವರು ಮಾತನಾಡಿ ಸತ್ಯ ಸಂಸ್ಕೃತಿ ಬೆಳೆದುಕೊಂಡು ಬರಬೇಕಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಈ ನಾಡಿನಲ್ಲಿ ಎಲ್ಲರೂ ಸಾಮರಸ್ಯದಿಂದ ಸುಂದರ ಬದುಕು ಕಟ್ಟಿಕೊಳ್ಳಬೇಕಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದ ಶ್ರೀ ರಂಭಾಪುರಿ ಜಗದ್ಗುರುಗಳವರ ವಿಶಾಲ ಸಂದೇಶ ಸೌಹಾರ್ದತೆ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ನಿವೃತ್ತ ಮುಖ್ಯ ಶಿಕ್ಷಕ ಎನ್.ಬಿ.ಶಿವಮೂರ್ತಿ ಧರ್ಮ ಸಮಾರಂಭವನ್ನು ಉದ್ಘಾಟಿಸಿದರು. ನೇತೃತ್ವ ವಹಿಸಿದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜೀವನ ಉನ್ನತಿಗೆ ಧರ್ಮಾಚರಣೆ ಅಗತ್ಯ. ಆಧ್ಯಾತ್ಮದ ಅರಿವು ಆಚರಣೆಯಿಂದ ಜೀವನ ಉಜ್ವಲಗೊಳ್ಳಲು ಸಾಧ್ಯ. ಗುರಿ ಮತ್ತು ಗುರುವಿನ ಮೂಲಕ ಜೀವನದಲ್ಲಿ ಶ್ರೇಯಸ್ಸನ್ನು ಕಾಣಬೇಕೆಂದರು.  ಮುಖ್ಯ ಅತಿಥಿಗಳಾಗಿ ಎಂ.ಎಸ್.ಧರ್ಮಯ್ಯ, ಗ್ರಾ.ಪಂ.ಅಧ್ಯಕ್ಷೆ ಪರಿಮಳ ಎ., ಉಪಾಧ್ಯಕ್ಷೆ ಸವಿತ, ಗ್ರಾ.ಪಂ. ಸದಸ್ಯರಾದ ಯತೀಶ್ ಎ., ಗಿರೀಶ್, ವೆಂಕಟೇಶ್, ಅನಿತ ಜೆ., ಮಾಗೇಶ, ಅಂಜನಮ್ಮ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು.  ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಕಲ ವಾದ್ಯ ವೈಭವ, ಕಳಸ ಕನ್ನಡಿಯೊಂದಿಗೆ ಜರುಗಿತು. ಮೆರವಣಿಗೆಯಲ್ಲಿ ಮಹಿಳಾ ಡೊಳ್ಳಿನ ಸಂಘ ಮತ್ತು ವೀರಗಾಸೆ ಕಲಾವಿದರು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದರು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದರು. ಬಂದ ಎಲ್ಲ ಭಕ್ತರಿಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.