ಬೆಳಕಿನ ಹಬ್ಬಕ್ಕೆ ದರ ಏರಿಕೆ ಬಿಸಿ

ಬೆಂಗಳೂರು,ನ 14- ಇಂದಿನಿಂದ ಮೂರು ದಿನಗಳ ಕಾಲ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ. ಆದರೆ ಶ್ರೀಸಾಮಾನ್ಯನಿಗೆ ದರಕ್ಕೆ ಏರಿಕೆ ಬಿಸಿ ತಟ್ಟಿದೆ. ಆದರೂ ಸಂಭ್ರಮದಿಂದ ದೀಪಾವಳಿ ಆಚರಣೆಗೆ ಜನರು ಸಜ್ಜಾಗಿದ್ದು, ಭರಾಟೆ ವ್ಯಾಪಾರದಲ್ಲಿ ತೊಡಗಿದ್ದಾರೆ.
ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ನಡುವೆ ನಗರದ ಕೆ,ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿಬಜಾರ್, ಬನಶಂಕರಿ, ಚಿಕ್ಕಪೇಟೆ, ಅವಿನ್ಯೂ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೂವು,ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಭರಾಟೆ ವ್ಯಾಪಾರ ನಡೆದಿದೆ.
ಆಕಾಶಬುಟ್ಟಿ ಬೆಳಕಿನ ಹಬ್ಬದ ಪ್ರಮುಖ ಆಕರ್ಷಣೆ. ಅವಿನ್ಯೂ ರಸ್ತೆಯಲ್ಲಿ ರಂಗು ರಂಗಿನ ಆಕಾಶ ಬುಟ್ಟಗಳು ಜನರನ್ನು ಆಕರ್ಷಿಸುತ್ತಿವೆ. ಜನರು ತಮಗಿಷ್ಟವಾದ ಆಕಾಶ ಬುಟ್ಟಿಗಳನ್ನು ಖರೀದಿಸಲು ಮುಂದಾಗಿದ್ದಾರೆ.
ಹೂವಿನ ದರ ಗಗನಕ್ಕೇರಿದ್ದು, ಕೆ,ಜಿ, ಮಲ್ಲಿಗೆ ಹೂವು ೮೦೦ ರೂ.ಗಳಿಗೆ ಮಾರಾಟವಾಗುತ್ತಿದೆ. ಚೆಂಡು ಹೂ ಕೆ.ಜಿ.ಗೆ ೧೦೦ ರೂ, ಪ್ರತಿ ಕೆ.ಜಿಎ. ಸೇವಂತಿಗೆ. ೨೦೦ ರೂ. ಕಾಕಡ ಪ್ರತಿ ಕೆ.ಜಿಗೆ ೧೨೦೦ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಗುಲಾಬಿ ಪ್ರತಿ ಕೆ.ಜಿ. ರೂ ೩೦೦ ಹಾಗೂ ತುಳಸಿ ದೊಡ್ಡ ಹಾರಕ್ಕೆ ೫೦೦ ರೂ.ಗಳಿಗೆ ಮಾರಾಟವಾಗುತ್ತಿದೆ.
ಹಣ್ಣುಗಳ ಧಾರಣೆಯಲ್ಲೂ ಏರಿಕೆ ಕಂಡುಬಂದಿದೆ. ಪ್ರತಿ ಕೆ.ಜಿ. ಸೇಬಿಗೆ ೧೨೦ ರೂ. ಒಂದು ಕೆ.ಜಿ ಮೋಸಂಬಿ – ೧೦೦ ರೂ., ಕೆ.ಜಿ ದಾಳಿಂಬೆ – ೧೫೦-೨೦೦ ರೂ, ಸೀತಾಫಲ ಕೆ.ಜಿಗೆ ೧೨೦ ರೂ, ಪ್ರತಿ ಕೆ.ಜಿ ದ್ರಾಕ್ಷಿಗೆ ೨೦೦ ರೂ. ಒಂದು ಕೆಜಿ ಬಾಳೆಹಣ್ಣು ೮೦ ರೂ. ಒಂದು ಕೆಜಿ ಸಪೋಟಾ – ೧೦೦ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.
ಮೈಸೂರು, ವಿಜಯಪುರ, ಹಾವೇರಿ, ಬೆಳಗಾವಿ, ಕಲಬುರ್ಗಿ, ರಾಮನಗರ, ರಾಯಚೂರು ಮೊದಲಾದ ಜಿಲ್ಲೆಗಳಲ್ಲೂ ಜನರು ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಮಾರುಕಟ್ಟೆಗಳಲ್ಲಿ ಭರಾಟೆ ವ್ಯಾಪಾರ ನಡೆಯುತ್ತಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಧರ್ಮಸ್ಥಳದಲ್ಲಿ ಸಾವಿರಾರು ಭಕ್ತರು ನೆರೆದಿದ್ದಾರೆ. ಆದರೆ, ಇಲ್ಲಿ ಮಾಸ್ಕ್ ನಿಯಮವನ್ನು ಆಡಳಿತ ಮಂಡಳಿ ಬಹಳ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿದೆ. ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ವಿಶೇಷವಾಗಿ ಅಲಂಕಾರಗೊಳಿಸಲಾಗಿದೆ. ಇಂದು ಒಂದೇ ದಿನ ಧರ್ಮಸ್ಥಳಕ್ಕೆ ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಚೆ ಇದೆ.
ಚಿಕ್ಕಮಗಳೂರಿನ ಪ್ರಸಿದ್ಧ ದೇವಿರಮ್ಮ ಜಾತ್ರೆ ಕೂಡ ಇಂದು ಆರಂಭಗೊಂಡಿದೆ. ವರ್ಷಕ್ಕೊಮ್ಮೆ ಮೂರು ದಿನ ದರ್ಶನ ನೀಡುವ ದೇವಿರಮ್ಮಳ ದರ್ಶನ ಪಡೆಯಲು ಸಾವಿರಾರು ಮಂದಿ ಬೆಟ್ಟವೇರುತ್ತಿದ್ದಾರೆ.
ಬಿಜೆಪಿಯಲ್ಲಿ ಉನ್ನತ ಹುದ್ದೆಗೇರಿ ಹೊಸ ಜವಾಬ್ದಾರಿ ಹೊತ್ತಿರುವ ಸಿ.ಟಿ. ರವಿ ತಮ್ಮ ಕುಟುಂಬ ಸಮೇತ ಬೆಟ್ಟ ಹತ್ತಿ ದೇವಿರಮ್ಮಳ ದರ್ಶನ ಪಡೆದರು.
ಈ ಮಧ್ಯೆ ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ಮಾರಾಟವನ್ನು ನಿಯಂತ್ರಿಸಲಾಗಿದೆ. ಹಸಿರು ಪಟಾಕಿ ಸಿಡಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಈ ಬಾರಿಯ ಪಟಾಕಿ ಮಾರಾಟ ಗಣಲೀಯವಾಗಿ ಕುಸಿತ ಉಂಟಾಗಿದೆ. ಇದರಿಂದಾಗಿ ಪಟಾಕಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.