ಬೆಲೆ ಹೆಚ್ಚಳದಿಂದ ಕಾರ್ಮಿಕರ ಬದುಕು ಅತಂತ್ರ

ಶಹಾಬಾದ: ನ.25:ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ, ಕೂಲಿ ಕಾರ್ಮಿಕರ ದಿನಗೂಲಿ ಹೆಚ್ಚಳವಾಗಿಲ್ಲ.ಇದರಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.

ಅವರು ನಗರದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಫೆಡರೇಷನ್ ಕಟ್ಟಡ ಕಾರ್ಮಿಕರ 3 ನೇ ತಾಲೂಕಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ವೇಳೆ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿ ಕೆಲ ಸೌಲಭ್ಯಗಳು ನೀಡಿದರೂ ಸಹ ಸಕಾಲಕ್ಕೆ ಕಾರ್ಮಿಕರಿಗೆ ತಲುಪಲೇ ಇಲ್ಲ. ಕಾರ್ಮಿಕರಿಗೆ ನೀಡಲಾದ ರೇಷನ್ ಕಿಟ್ನಲ್ಲೂ (ಖಚಿಣioಟಿ ಏiಣ) ಸರ್ಕಾರ ಕೋಟ್ಯಂತರ ರು. ಗಳ ಅವ್ಯವಹಾರವೆಸಗಿದೆ ಎಂದು ದೂರಿದರು.

ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಕಾರ್ಮಿಕ ಸಂಘ ಜೊತೆ ಕಾರ್ಮಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿಗಳೆನ್ನದೆ ಶ್ರಮಿಸಿದ್ದಾರೆ ಇದರಿಂದಾಗಿ ಸಾವಿರಾರು ಕಾರ್ಮಿಕರು ಹಸಿವಿನ ದವಡೆಯಿಂದ ಪಾರಾಗಿದ್ದಾರೆ. ಇದು ಅಭಿನಂದನಾರ್ಹ ಕೆಲಸ. ಆದರೆ ಕೊರೊನಾ ಅಲೆಗಳಲ್ಲಿ ನಿರುದ್ಯೋಗಿಗಳಾಗಿರುವ ಲಕ್ಷಾಂತರ ಕಾರ್ಮಿಕರಿಗೆ ಸರ್ಕಾರ ಉದ್ಯೋಗ ಭದ್ರತೆ ಮತ್ತು ಸೌಲಭ್ಯಗಳ ಅಸಮರ್ಪಕ ಸಿಗದೇ ಇರುವ ಕಾರಣದಿಂದಾಗಿ ಕಾರ್ಮಿಕರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ ಎಂದು ನುಡಿದರು.

ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಬಹುತೇಕ ದುಡಿಯುವ ವರ್ಗದ ಕಾರ್ಮಿಕರಿಗೆ ಕಾರ್ಮಿಕ ಗುರುತಿನ ಚೀಟಿ ಇಲ್ಲ. ಪರಿಣಾಮ ಕಾರ್ಮಿಕರು ಇಲಾಖೆ ನೀಡುವ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆದರೆ ಜಮೀನು ಹೊಂದಿದ ವ್ಯಕ್ತಿಗಳಿಗೆ ಕಾರ್ಮಿಕ ಗುರುತಿನ ಚೀಟಿ ನೀಡಲಾಗಿದೆ. ಇದರಿಂದ ಕೂಡಲೇ ಇಂತಹ ನಕಲಿ ಚೀಟಿಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ, ಕೆಪಿಆರ್ ಎಸ್ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ, ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಶೇಖಮ್ಮ ಕುರಿ, ಯುವ ಸಾಹಿತಿ ರವಿ ಬೆಳಮಗಿ, ದಲಿತ ಮುಖಂಡ ಶಂಕರ ಜಾನೆ ಮಾತನಾಡಿದರು.

ನಾಗಪ್ಪ ರಾಯಚೂರುಕರ್ ನಿರೂಪಿಸಿದರು. ಭೀಮಷ್ಯಾ ಹಳ್ಳಿ, ರಾಮು ಜಾಧವ್, ಅರ್ಜುನ್ ನಾಟಿಕಾರ ಇದ್ದರು.