ಬೆಲೆ ಬಾಳುವ ವಸ್ತು ಹಾಗೂ ನಗದು ಇದ್ದ ಬ್ಯಾಗ್‍ಅನ್ನು ಚಾಲಕ ಸಂತೋಷ್ ಮರಳಿ ಪ್ರಯಾಣಿಕರಿಗೆ ಹಿಂತಿರುಗಿಸಿದ್ದ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.26:- ಸಾರಿಗೆ ಬಸ್ ನಲ್ಲಿ ಸಿಕ್ಕ ಮಹಿಳಾ ಪ್ರಯಾಣಿಕರೊಬ್ಬರ ಬೆಲೆ ಬಾಳುವ ವಸ್ತು ಹಾಗೂ ನಗದು ಇದ್ದ ಬ್ಯಾಗ್ ಅನ್ನು ಚಾಲಕ ಕಮ್ ನಿರ್ವಾಹಕ ಸಂತೋಷ್ ಮರಳಿ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದು ಮಾನವೀಯತೆ ಪ್ರದರ್ಶಿಸಿದ್ದಾರೆ.
ಪಿರಿಯಾಪಟ್ಟಣ ಸಾರಿಗೆ ಘಟಕದಲ್ಲಿ ಚಾಲಕ ಕಮ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ (ಬಿಲ್ಲೆ ಸಂಖ್ಯೆ 3133) ಮಾರ್ಗ ಸಂಖ್ಯೆ 67 ರಲ್ಲಿ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಮೈಸೂರಿನ ದಟ್ಟಗಳ್ಳಿ  ನಿವಾಸಿ ವಿನುತ ಎಂಬ ಪ್ರಯಾಣಿಕರು ಸಂಜೆ 6 ಗಂಟೆ ಸಮಯದಲ್ಲಿ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಟಿಕೆಟ್ ಪಡೆದು ಪ್ರಯಾಣಿಸಿದ್ದು ಪಿರಿಯಾಪಟ್ಟಣದಲ್ಲಿ ಇಳಿಯುವ ಸಂದರ್ಭ ತಮ್ಮ ಬ್ಯಾಗ್ ಮರೆತು ಮಡಿಕೇರಿಗೆ ಪ್ರಯಾಣಿಸಿದ್ದಾರೆ ಈ ವೇಳೆ ರಾತ್ರಿ ಬಸ್ ಪಿರಿಯಾಪಟ್ಟಣದಲ್ಲಿ ತಂಗಿದ್ದಾಗ ಬಸ್ ನಲ್ಲಿ ಬ್ಯಾಗ್ ಗಮನಿಸಿದ ಸಂತೋಷ್ ತಮ್ಮ ಸಹೋದ್ಯೋಗಿ ಚಾಲಕ ನಿರ್ವಾಹಕರೊಂದಿಗೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಅದರಲ್ಲಿ ಸಿಕ್ಕ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಯನ್ನು ಗೊತ್ತು ಮಾಡಿ ಬ್ಯಾಗ್ ನಲ್ಲಿದ್ದ 5 ಸಾವಿರ ಹಣ ಹಾಗೂ ಬ್ಯಾಂಕ್ ದಾಖಲಾತಿ ಎಟಿಎಂ ಆಧಾರ್ ವೋಟರ್ ಐಡಿ ಸೇರಿದಂತೆ ಬ್ಯಾಗ್ ನಲ್ಲಿದ್ದ ಇತರೆ ವಸ್ತುಗಳ ಬಗ್ಗೆ ಅವರು ನಿಖರವಾಗಿ ತಿಳಿಸಿದ ಬಳಿಕ ಅವರನ್ನು ಮುಂಜಾನೆ ಪಿರಿಯಾಪಟ್ಟಣ ಬಸ್ ನಿಲ್ದಾಣಕ್ಕೆ ಕರೆಸಿ ಬ್ಯಾಗ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕ ಮೆರೆದಿದ್ದಾರೆ.
ಸಂತೋಷ್ ಅವರ ಕಾರ್ಯಕ್ಕೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಸೇರಿದಂತೆ ಸಾರಿಗೆ ನಿಲ್ದಾಣದ ನಿಯಂತ್ರಣಾಧಿಕಾರಿಗಳು ಸಹೋದ್ಯೋಗಿಗಳು ಮತ್ತು ಬ್ಯಾಗ್ ಕಳೆದುಕೊಂಡಿದ್ದ ವಿನುತ ಅವರು ಶ್ಲಾಘನೆ ವ್ಯಕ್ತಪಡಿಸಿ ಅಭಿನಂದಿಸಿದರು.