ಬೆಲೆ ಕುಸಿತ: ರೈತ ಕಂಗಾಲು


ಲಕ್ಷ್ಮೇಶ್ವರ,ನ.5: ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಗೋವಿನ ಜೋಳದ ಬೆಳೆ ಈಗ ಕಟಾವಿಗೆ ಬಂದಿದ್ದು ಬಂದಿರುವ ಫಸಲು ಮುಕ್ತ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ಇಲ್ಲದಿರುವುದರಿಂದ ರೈತರು ಕಂಗಲಾಗಿದ್ದಾರೆ.
ವಿಪರೀತವಾದ ಮಳೆ ಸುರಿದು ಇಳುವರಿ ಕುಂಠಿತವಾಗಿದ್ದು ಬಂದಿರುವ ಬೆಳೆಗೆ ಉತ್ತಮ ಬೆಲೆ ಸಿಗುವುದೆಂಬ ಆಶಯದಲ್ಲಿ ರೈತರಿದ್ದರು ಆದರೆ ಗೋವಿನ ಜೋಳ ಗುಣಮಟ್ಟವು ಸ್ವಲ್ಪ ಕಳಪೆಯಾಗಿದ್ದು ಇದನ್ನೇ ವ್ಯಾಪಾರಸ್ಥರು ನೆಪ ಮಾಡಿಕೊಂಡು ರೈತರ ಮೇಲೆ ಬೆಲೆ ಯ ಗದಾ ಪ್ರಹಾರ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಅನೇಕ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಅನೇಕ ತಿಂಗಳಗಳಾಗಿದ್ದರು ರೈತರು ಫಸಲನ್ನು ಮಾಡಿದ ನಂತರವೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗುತ್ತಿರುವುದು ಒಂದು ರೀತಿಯ ಅಣಕವಾದಂತಾಗಿದೆ.
ಕೇಂದ್ರ ಸರ್ಕಾರ ನಿಗದಿಪಡಿಸಿದ ಗೋವಿನ ಜೋಳದ ಬೆಂಬಲ ಬೆಲೆ ಕ್ವಿಂಟಲ್ಲಿಗೆ 1962 ರೂ ಘೋಷಿಸಿದರೂ ಬೆಂಬಲ ಬೆಲೆ ಖರೀದಿ ಕೇಂದ್ರ ಮಾತ್ರ ಆರಂಭಿಸುವುದಿಲ್ಲ ಇದರಿಂದಾಗಿ ರೈತರು ಮುಕ್ತ ಮಾರುಕಟ್ಟೆಯಲ್ಲಿ 1500 ಗಳಿಂದ 1700 ಗಳ ವರೆಗೆ ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಗಂಗಪ್ಪ ಗೊಜ್ಜಗಜ್ಜಿ ಎಂಬ ರೈತ ತನ್ನ 4 ಎಕ್ರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳ ಸುಮಾರು 80 ಕ್ವಿಂಟಲ್ಲಿಗೂ ಹೆಚ್ಚು ಬರಬೇಕಾಗಿತ್ತು ಆದರೆ ಕೇವಲ 30 ರಿಂದ 40 ಕ್ವಿಂಟಲ್ ಬಂದಿದ್ದು ಇದನ್ನು ಬೆಳೆಯಲು 50,000 ಖರ್ಚು ಮಾಡಿದ್ದಾರೆ ಆದರೆ ಇಳುವರಿ ಕುಸಿತ ಮತ್ತು ಬೆಲೆ ಕುಸಿತದಿಂದಾಗಿ ಕೈ ಚೆಲ್ಲಿ ಕುಳಿತಿದ್ದಾರೆ.
ಕಾಂಗ್ರೆಸ್ ಮುಖಂಡ ರಾಮಣ್ಣ ಲಮಾಣಿ ಅವರು ಈ ಕುರಿತು ಹೇಳಿಕೆ ನೀಡಿ ಕೇಂದ್ರ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡುವದಾಗಿ ರೈತರ ಮೂಗಿಗೆ ತುಪ್ಪ ಸವರುತ್ತಿದೆ ಸರ್ಕಾರಕ್ಕೆ ನಿಜವಾಗಿಯೂ ಬಗ್ಗೆ ಕಾಳಜಿ ಇದ್ದರೆ ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಿ ರೈತರ ಸಂಕಷ್ಟಕ್ಕೆ ಸಹಾಯದ ಹಸ್ತ ನೀಡಬೇಕು ಇಲ್ಲದಿದ್ದರೆ ರೈತರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.