ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ಸೈಕಲ್ ಜಾಥಾ

ಬೆಂಗಳೂರು, ಸೆ.೨೦- ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕ್ರಮ ಖಂಡಿಸಿ ಕಾಂಗ್ರೆಸ್ ನಾಯಕರು ಬೃಹತ್ ಸೈಕಲ್ ಜಾಥಾ ನಡೆಸಿದರು.
ನಗರದಲ್ಲಿಂದು ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗದಿಂದ ವಿಧಾನಸೌಧದ ಮುಖ್ಯ ದ್ವಾರದವರೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ
ರಾಜ್ಯ ಕಾಂಗ್ರೆಸ್ ನಾಯಕರು ಸೈಕಲ್?ನಲ್ಲಿ ಜಾಥಾ ನಡೆಸಿ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬೆಲೆ ಏರಿಕೆಯಿಂದಾಗಿ ಹೆಣ್ಣು ಮಕ್ಕಳು ತಮ್ಮ ತಾಳಿಯನ್ನು ಮಾರಿಕೊಂಡಿದ್ದಾರೆ. ಅಲ್ಲದೆ,ಕೇಂದ್ರ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನೂ, ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ರಾಜ್ಯ ಸರ್ಕಾರ ಸೆಸ್ ಅನ್ನು ಕೂಡ ಕಡಿಮೆ ಮಾಡುತ್ತಿಲ್ಲ.ಸರ್ಕಾರ ಸುಳ್ಳು ಹೇಳಿಕೊಂಡು ಅಧಿಕಾರ ಮಾಡುತ್ತಿದೆ. ಇದರಿಂದ ಜನರು ಚಿನ್ನವನ್ನೆಲ್ಲಾ ಬ್ಯಾಂಕ್ ನಲ್ಲಿ ಇಟ್ಟು ಜೀವನ ಮಾಡಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, .ಕೆ.ಶಿವಕುಮಾರ್ ಮೊನ್ನೆ ಎತ್ತಿನಗಾಡಿಯಲ್ಲಿ ತೆರಳಿ ಪ್ರತಿಭಟನೆ ನಡೆಸಿದ್ದೆವು. ಇಂದು ಸೈಕಲ್‌ನಲ್ಲಿ ತೆರಳಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಡೆದುಕೊಂಡು ಹೋಗಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಮೊನ್ನೆ ಎತ್ತಿನಗಾಡಿಯಲ್ಲಿ ತೆರಳಿ ಪ್ರತಿಭಟನೆ ನಡೆಸಿದಾಗ ಅದರ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು. ನಡೆದುಕೊಂಡು ಬರಬೇಕಿತ್ತು ಎಂದಿದ್ದರು. ಹೀಗಾಗಿ ನಮ್ಮ ಪ್ರತಿಭಟನೆಗೆ ಸರಿಯಾದ ಉತ್ತರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಡೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಜಾಥಾಕ್ಕೆ ಕೆಲ ಕಾಲ ತಡೆ..!
ಪೆಟ್ರೋಲ್, ಡೀಸೆಲ್, ಅಗತ್ಯವಸ್ತುಗಳ ಬೆಲೆ ಏರಿಕೆಗೆ ಖಂಡಿಸಿವಿರೋಧ ಪಕ್ಷದ ನಾಯಕರು, ಜಾಥಾ ನಡೆಸಿದರು.ಇಲ್ಲಿನ, ಕ್ವೀನ್ಸ್ ರಸ್ತೆಯಲ್ಲಿ ಸೈಕಲ್ ಜಾಥಾವನ್ನು ಕೆಲ ಕಾಲ ಪೊಲೀಸರು ತಡೆದಿದರು.ಆದರೂ, ಬ್ಯಾರಿಕೇಡ್ ತಳ್ಳಿ ಮುಂದೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ ಪ್ರಸಂಗ ಜರುಗಿತು.
ಶಾಸಕರ ಎಲೆಕ್ಟ್ರಾನಿಕ್ ಸೈಕಲ್..!
ಕಾಂಗ್ರೆಸ್ ಪಕ್ಷದ ಕೆಲ ಶಾಸಕರಿಗೆ ಸೈಕಲ್ ದೊರೆಯದ ಕಾರಣ, ಆನ್ ಲೈನ್ ಮೂಲಕ ಎಲೆಕ್ಟ್ರಿಕ್ ಸೈಕಲ್ ತೆಗೆದುಕೊಂಡು ಜಾಥಾದಲ್ಲಿ ಪಾಲ್ಗೊಂಡ ದೃಶ್ಯ ಪ್ರತಿಭಟನೆಯಲ್ಲಿ ಕಂಡಿತು.