ಬೆಲೆ ಏರಿಕೆ ವಿರೋಧಿಸಿ ಕಟ್ಟಿಗೆ ಒಲೆ ಹಚ್ಚಿ ರೊಟ್ಟಿ ಬೇಯಿಸಿ ಪ್ರತಿಭಟನೆ

ಕಲಬುರಗಿ,ಜು.20-ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಮತ್ತು ಆಹಾರ ಧಾನ್ಯ, ಹಾಲು, ಮೊಸರಿನ ಮೇಲೆ ಶೇ.5 ರಷ್ಟು ಜಿ.ಎಸ್.ಟಿ.ವಿಧಿಸಿರುವುದನ್ನು ಖಂಡಿಸಿ ಅಖಿಲ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲನಾ ಸಮಿತಿ ವತಿಯಿಂದ ನಗರದಲ್ಲಿಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಿಳಾ ಒಕ್ಕೂಟದ ಕಾರ್ಯಕರ್ತರು ರಸ್ತೆ ಮೇಲೆ ಕಟ್ಟಿಗೆ ಹಚ್ಚಿ ಒಲೆ ಉರಿಸಿ ರೊಟ್ಟಿ ಬೇಯಿಸುವುದರ ಮೂಲಕ ಸರ್ಕಾರದ ಬಡವರ ಮತ್ತು ಮಧ್ಯಮವರ್ಗದವರ ವಿರೋಧಿ ನೀತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಲೆಯ ಮೇಲೆ ಖಾಲಿ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ನಿರಂತರವಾಗಿ ಬಡವರ ಮತ್ತು ಮಧ್ಯಮ ವರ್ಗದವರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. 25 ಕೆಜಿಗಿಂತ ಕಡಿಮೆ ತೂಕದ ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸಿರುವುದು ಅತ್ಯಂತ ನಿರ್ದಯವಾದ ಕ್ರಮವಾಗಿದೆ. ಬಡವರ ಕನಿಷ್ಠ ಬದುಕನ್ನು ಕಸಿದುಕೊಳ್ಳುವ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾ ಮುಖಂಡರಾದ ಪದ್ಮಾವತಿ ಮಾಲಿಪಾಟೀಲ, ಮರಿಯಮ್ ಬೇಗಂ, ರುಕ್ಮಿಣಿ, ನಗರ ಅಧ್ಯಕ್ಷೆ ಶಿವಲಿಂಗಮ್ಮ ವಿ.ಲೆಂಗಟಿಕರ್, ಕಾರ್ಯದರ್ಶಿ ಶರಣಮ್ಮ ಪೂಜಾರಿ, ಅನಿತಾ ಬಕರೆ, ಲಕ್ಷ್ಮೀ ದೊಡ್ಮನಿ, ವಿಜಯಲಕ್ಷ್ಮೀ ಯಳಸಂಗಿ, ಮೀನಾಕ್ಷಿ , ಚಂದಮ್ಮ ಸೀತನೂರ, ಸಾಬಮ್ಮ ನಾಟಿಕಾರ, ಶಿವಮ್ಮ ವಾಡೇಕರ್, ಮಾಳಮ್ಮ ಭೂಸನೂರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.