ಬೆಲೆ ಏರಿಕೆ ವಿಧಾನಸಭೆಯಲ್ಲಿ ವಾಗ್ವಾದ


ಬೆಂಗಳೂರು, ಸೆ. ೧೫- ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಪರಸ್ಪರ ವಾಗ್ಯುದ್ಧ, ಮಾತಿನ ಚಕಮಕಿ, ನಡೆದು ಸದನದಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ನಿಯಮ ೬೯ರಡಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ಚರ್ಚೆ ಆರಂಭಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯ ತತ್ತರಿಸಿದ್ದಾನೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಹರಿಹಾಯ್ದರು.
ಈ ಹಿಂದೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್, ಡೀಸೆಲ್ ಬೆಲೆ ೭ ಪೈಸೆಯಷ್ಟು ಹೆಚ್ಚಾಗಿದ್ದಕ್ಕೆ ಆಗಿನ ವಿರೋಧ ಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ರವರು ಇದನ್ನು ಕ್ರಿಮಿನಲ್ ಲೂಟಿ ಎಂದು ಕರೆದಿದ್ದರು. ಈಗ ನಾವು ಏನು ಕರೆಯಬೇಕು ಎಂದು ಸಿಟ್ಟಿನಿಂದ ಹೇಳಿದರು.
ಕಳೆದ ೭ ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಬೆಲೆ ಏರಿಕೆಯಾಗಿದೆ. ಅದರಲ್ಲೂ ಕಳೆದ ೨ ವರ್ಷಗಳಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಆಹಾರ ಧಾನ್ಯಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಇಂಧನ ದರವನ್ನು ಇಳಿಸಿಲ್ಲ ಎಂದು ದೂರಿದರು.
ಮಧ್ಯೆ ಪ್ರವೇಶಿಸಿದ ಸಚಿವ ಮಾಧುಸ್ವಾಮಿ ಅವರು, ಪೆಟ್ರೋಲ್, ಡೀಸೆಲ್ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ರಾಜ್ಯಕ್ಕೂ ಅದಕ್ಕೂ ಸಂಬಂಧ ಇಲ್ಲ. ಸಂಸತ್ತ್‌ನಲ್ಲಿ ಇದನ್ನು ಹೇಳಲಿ, ಇಲ್ಲಿ ಮಾಡುತ್ತಿರುವುದು ಸಂಸತ್ ಭಾಷಣವೋ, ಅಸೆಂಬ್ಲಿ ಭಾಷಣವೋ ಎಂದು ಆಕ್ಷೇಪ ತೆಗೆದರು.
ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಒಮ್ಮೆಗೆ ಎದ್ದು ನಿಂತು ಮಾಧುಸ್ವಾಮಿಯವರ ವಿರುದ್ಧ ಮುಗಿ ಬಿದ್ದರು. ಈ ಹಂತದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ಉಂಟಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ.
ಗದ್ದಲದಲ್ಲೇ ಮಾತು ಮುಂದುವರೆಸಿದ ಸಿದ್ದರಾಮಯ್ಯನವರು ನಾನು ಬೆಲೆ ಏರಿಕೆ ಬಗ್ಗೆ ಮಾತನಾಡುವುದು ಬೇಡ ಎಂದರೆ ಹೇಗೆ, ಇದು ರಾಜ್ಯಕ್ಕೆ ಸಂಬಂಧಿಸಿದ್ದು. ಬೆಲೆ ಏರಿಕೆಯಿಂದ ಕರ್ನಾಟಕದ ಜನರಿಗೂ ತೊಂದರೆಯಾಗಿದೆ. ಪಾರ್ಲಿಮೆಂಟ್‌ನಲ್ಲಿ ಮಾತನಾಡಿ ಎಂದರೆ ಹೇಗೆ ಎಂದು ಹರಿಹಾಯ್ದರು.
ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಬೆಲೆ ಏರಿಕೆಯಿಂದ ಆಗಿರುವ ತೊಂದರೆಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಬೆಲೆ ಏರಿಕೆಗೆ ತೈಲ ಬಾಂಡ್ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಾರಣ ಎಂದು ಬಿಜೆಪಿ ಹೇಳುತ್ತಿರುವುದು ಸರಿಯಲ್ಲ ಎಂದರು.
ಎಲ್ಲ ವಿಚಾರಗಳನ್ನು ಸಂಸತ್‌ನಲ್ಲಿ ಮಾತನಾಡಬೇಕು ನಿಜ. ಸಾಧ್ಯವಾದರೆ, ಎಲ್ಲರೂ ಒಪ್ಪುವುದಾದರೆ ಬೆಲೆ ಏರಿಕೆ ವಿರುದ್ಧ ಸದನದಲ್ಲಿ ಒಂದು ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸೋಣ ಎಂದು ಸಲಹೆ ಮಾಡಿದರು.
ಈ ಹಂತದಲ್ಲಿ ಸುಧಾಕರ್ ಅವರು ಎದ್ದುನಿಂತು ಬೆಲೆ ಏರಿಕೆ ನಿರಂತರ ಪ್ರಕ್ರಿಯೆ. ಸುಮ್ಮನೆ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಮತ್ತೆ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ಯುದ್ಧಗಳು ನಡೆದವು.
ಗದ್ದಲದಲ್ಲೇ ಮತ್ತೆ ಮಾತು ಮುಂದುವರೆಸಿದ ಸಿದ್ದರಾಮಯ್ಯನವರು ತೈಲ ಬಾಂಡ್ ತಂದಿದ್ದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನಿಜ. ಆ ಕಾಲದಲ್ಲಿ ಅವರು ಕಾಲ ಕಾಲಕ್ಕೆ ಬಡ್ಡಿ, ಅಸಲು ಎಲ್ಲವನ್ನು ಚುಪ್ತ ಮಾಡಿದ್ದಾರೆ ಎಂದು ಹೇಳಿದಾಗ, ಸಚಿವ ಆರ್. ಅಶೋಕ್ ಎದ್ದುನಿಂತು ತೈಲ ಬಾಂಡ್ ತಂದಿದ್ದು ಸರಿಯೇ, ತಪ್ಪೇ ಎನ್ನುವುದನ್ನು ನೀವೇ ಹೇಳಿ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
ಆಗ ಸಿದ್ದರಾಮಯ್ಯನವರು ಆ ಸಂದರ್ಭದಕ್ಕೆ ಸರಿ ಇತ್ತು. ತೈಲ ಕಂಪೆನಿಗಳು ಮತ್ತು ಗ್ರಾಹಕರ ಮೇಲೆ ಬೆಲೆ ಏರಿಕೆ ಬರೆ ಬೀಳಬಾರದು ಎಂಬ ಉದ್ದೇಶದಿಂದ ತೈಲ ಬಾಂಡ್ ಮಾಡಲಾಗಿತ್ತು ಎಂದು ತೈಲ ಬಾಂಡ್‌ನ್ನು ಸಮರ್ಥಿಸಿಕೊಂಡರು.
ಮತ್ತೆ ಬೆಲೆ ಏರಿಕೆಯ ಮೇಲೆ ತಮ್ಮ ಮಾತನ್ನು ಕೇಂದ್ರೀಕರಿಸಿದ ಸಿದ್ದರಾಮಯ್ಯನವರು ಬೆಲೆ ಏರಿಕೆ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಶ್ರೀಸಾಮಾನ್ಯ ಈಗಾಗಲೇ ತೆರಿಗೆ ಹೊರೆಯಿಂದ ಬಳಲುತ್ತಿದ್ದಾನೆ. ಬೆಲೆ ಏರಿಕೆ ಶ್ರೀಸಾಮಾನ್ಯನ ಜೀವನವನ್ನು ದುಸ್ತರಗೊಳಿಸಿದೆ. ಕಳೆದ ೭ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಒಂದರಿಂದಲೇ ಪೆಟ್ರೋಲ್-ಡೀಸೆಲ್ ಸುಂಕ ಕೇಂದ್ರ ಸರ್ಕಾರಕ್ಕೆ ೨೧ ಸಾವಿರ ಕೋಟಿ ರೂ. ಸಂದಾಯವಾಗಿದೆ ಎಂದು ಅವರು ಹೇಳಿದರು.
ಸದನದಲ್ಲಿ ಇಷ್ಟೆಲ್ಲಾ ವಾಗ್ಯುದ್ದ, ಮಾತಿನ ಚಕಮಕಿಯಾಗುವ ಹೊತ್ತಿಗೆ ಭೋಜನದ ಸಮಯವಾಗಿದ್ದರಿಂದ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.