ಬೆಲೆ ಏರಿಕೆ ಮೋದಿ ಕಳವಳ

ದಕ್ಷಿಣ ಜಾಗತಿಕ ಶೃಂಗಸಭೆ
ನವದೆಹಲಿ,ಜ.೧೨: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಕಳವಳ ವ್ಯಕ್ತಪಡಿಸಿದ್ದು, ಆಹಾರ ಧಾನ್ಯಗಳು, ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆ, ಕೋವಿಡ್‌ನ ಆರ್ಥಿಕ ಪರಿಣಾಮ ಮತ್ತು ಹವಾಮಾನ ಬದಲಾವಣೆಯಲ್ಲಿ ಉಂಟಾಗುವ ನೈಸರ್ಗಿಕ ವಿಕೋಪಗಳು ಕಳವಳಕಾರಿ ಎಂದಿದ್ದಾರೆ.ದೆಹಲಿಯಲ್ಲಿಂದು ವಾಯ್ಸ್ ಆಫ್ ಗ್ಲೋಬಲ್ ಸೌಥ್ ಶೃಂಗಸಭೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ ಅವರು. ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟ ಈ ಸ್ಥಿರತೆಯ ಸ್ಥಿತಿ ಎಷ್ಟು ಕಾಲ ಇರುತ್ತದೆ ಎಂಬುದು ಊಹಿಸಲಾಗುತ್ತಿಲ್ಲ ಎಂದರು.
ಆಹಾರ ಧಾನ್ಯಗಳು, ಇಂಧನ, ರಸಗೊಬ್ಬರಗಳ ಬೆಲೆಯೂ ಏರಿಕೆಯಾಗುತ್ತಿದೆ. ಜತೆಗೆ ಹವಾಮಾನ ಬದಲಾವಣೆ, ಕೋವಿಡ್‌ನ ಆರ್ಥಿಕ ಪರಿಣಾಮ ಇವೆಲ್ಲ ಕಳವಳಕ್ಕೆ ಕಾರಣವಾಗಿದೆ ಎಂದರು.ಜಾಗತಿಕ ಸಮಸ್ಯೆಗಳ ಸೃಷ್ಟಿಗೆ ದಕ್ಷಿಣ ದೇಶಗಳು ಕಾರಣವಲ್ಲದಿದ್ದರೂ ಈ ಜಾಗತಿಕ ಸಮಸ್ಯೆಗಳು ದಕ್ಷಿಣ ದೇಶಗಳ ಮೇಲೆ ಪರಿಣಾಮ ಬೀರಿವೆ ಎಂದರು.ಭಾರತ ಜಾಗತಿಕ ದಕ್ಷಿಣ ದೇಶಗಳೊಂದಿಗೆ ತನ್ನ ಅಭಿವೃದ್ಧಿಯ ಅನುಭವವನ್ನು ಹಂಚಿಕೊಂಡಿದೆ. ಶೃಂಗ ಸಭೆಯೂ ಜಾಗತಿಕ ದಕ್ಷಿಣ ದೇಶಗಳ ದೃಷ್ಟಿಕೋನಗಳು ಮತ್ತು ಆದ್ಯತೆಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ಹಾಗೆಯೇ ಈ ದೇಶಗಳನ್ನು ಒಟ್ಟಿಗೆ ತರುವ ಕೆಲಸ ಮಾಡುತ್ತಿದೆ ಎಂದರು.ಸಮಾಜಗಳು ಮತ್ತು ಆರ್ಥಿಕತೆಗಳನ್ನು ಪರಿಹರಿಸುವ ಸರಳ ಸುಸ್ಥಿರ ಮತ್ತು ಅಗತ್ಯ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಅಭಿವೃದ್ಧಿಶೀಲ ಜಗತ್ತು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ ನಮ್ಮ ಸಮಯ ಬರುತ್ತಿದೆ ಎಂಬ ಆಶಾವಾದ ನನ್ನದು ಎಂದರು.
ದಕ್ಷಿಣ ಜಾಗತಿಕ ದೇಶಗಳ ಧ್ವನಿ ಭಾರತದ ಧ್ವನಿ, ನಿಮ್ಮ ಆದ್ಯತೆಗಳು ಭಾರತದ ಆದ್ಯತೆಗಳು ಎಂದು ಪ್ರಧಾನಿ ಮೋದಿ ಹೇಳಿ ಜಾಗತಿಕ ದಕ್ಷಿಣದ ಸಮಾನ ಧ್ವನಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.ಭವಿಷ್ಯದಲ್ಲಿ ಜಾಗತಿಕ ದಕ್ಷಿಣ ದೇಶಗಳು ಅತೀ ದೊಡ್ಡ ಪಾಲನ್ನು ಹೊಂದಲಿವೆ. ಜಾಗತಿಕ ಜನಸಂಖ್ಯೆಯ ೪ನೇ ೩ ಭಾಗದಷ್ಟು ನಮ್ಮ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.ಜಾಗತಿಕ ದಕ್ಷಿಣ ದೇಶಗಳು ಪರಸ್ಪರ ಅಭಿವೃದ್ಧಿ ಪಾಲುದಾರಿಕೆಗಳು ಎಲ್ಲ ಭೌಗೋಳಿಕ ಮತ್ತು ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿದೆ. ಭಾರತವು ಸದಾ ತನ್ನ ಅಭಿವೃದ್ಧಿಯ ಅನುಭವವನ್ನು ಹಂಚಿಕೊಂಡಿದೆ ಎಂದರು.
ದಕ್ಷಿಣ ಜಾಗತಿಕ ದೇಶಗಳು ಅಭಿವೃದ್ಧಿಯ ಪಾಲುದಾರಿಕೆಗಳನ್ನು ಹೊಂದಿದ್ದು, ಭೌಗೋಳಿಕತೆ ಮತ್ತು ವೈವಿಧ್ಯಮಯ ವಲಯಗಳನ್ನು ಒಳಗೊಂಡಿದೆ. ಸಾಂಕ್ರಾಮಿಕ ಸಮಯದಲ್ಲಿ ೧೦೦ಕ್ಕೂ ಹೆಚ್ಚು ದೇಶಗಳಿಗೆ ಔಷಧ ಮತ್ತು ಲಸಿಕೆಗಳನ್ನು ಪೂರೈಸಿದ್ದೇವೆ. ಭಾರತ ಯಾವಾಗಲು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.ಯುದ್ಧ, ಸಂಘರ್ಷ, ಭಯೋತ್ಪಾದನೆ ಮತ್ತು ರಾಜಕೀಯ ಉದ್ವಿಗ್ನತೆಗಳನ್ನು ಕಂಡ ಮತ್ತೊಂದು ಕಷ್ಟಕರ ವರ್ಷದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಉಕ್ರೇನ್‌ನ ಪರಿಣಾಮಗಳನ್ನೂ ನೋಡಿದ್ದೇವೆ ಎಂದರು.ಭಾರತವು ಈ ವರ್ಷ ಜಿ೨೦ ಅಧ್ಯಕ್ಷತೆಯನ್ನು ಹೊಂದಿದೆ. ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸುವುದು ನಮ್ಮ ಗುರಿಯಾಗಿರುವುದು ಸಹಜ, ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಘೋಷವಾಕ್ಯದೊಂದಿಗೆ ಮುನ್ನಡೆದಿದ್ದೇವೆ ಎಂದರು.ಜಗತ್ತನ್ನು ಬಿಕ್ಕಟ್ಟಿನಿಂದ ಪಾರುಮಾಡಿ ಶಕ್ತಿಯುತಗೊಳಿಸಲು ಸುಧಾರಣೆಯ ಜಾಗತಿಕ ಕಾರ್ಯಸೂಚಿ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.ಎಲ್ಲ ರಾಷ್ಟ್ರಗಳ ಸಾರ್ವಭೌಮತವನ್ನು ಗೌರವಿಸಿ ಕಾನೂನಿನ ನಿಯಮ ಮತ್ತು ಶಾಂತಿಯುತ ನಿರ್ಣಯಗಳ ಮೂಲಕ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಮೂಲಕ ಸುಧಾರಿಸಬೇಕಿದೆ ಎಂದು ಅವರು ಹೇಳಿದರು.ಜಾಗತಿಕ ದಕ್ಷಿಣ ದೇಶಗಳನ್ನು ಒಟ್ಟುಗೂಡಿಸಲು ಉಕ್ರೇನ್ ಸಂಘರ್ಷದಿಂದ ಉಂಟಾದ ಆಹಾರ ಮತ್ತು ಇಂಧನ ಭದ್ರತೆ ಸೇರಿದಂತೆ ವಿವಿಧ ಜಾಗತಿಕ ಸವಾಲುಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಕಾಳಜಿಗಳನ್ನು ಹಂಚಿಕೊಳ್ಳಲು ಭಾರತ ಎರಡು ದಿನಗಳ ಈ ಶೃಂಗಸಭೆಯನ್ನು ಆಯೋಜಿಸಿದ್ದು, ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ದೇಶಗಳ ಪ್ರತಿನಿಧಿಗಳು ಈ ಶೃಂಗದಲ್ಲಿ ಭಾಗಿಯಾಗಿವೆ.