ಬೆಲೆ ಏರಿಕೆ ನಿರ್ಧಾರ ಕೈಬಿಡಲು ಆಗ್ರಹಿಸಿ ಆನ್‍ಲೈನ್ ಪ್ರತಿಭಟನೆ

ಕಲಬುರಗಿ,ಜೂ.11- ವಿದ್ಯುತ್ ದರ ಮತ್ತು ಪೆಟ್ರೋಲ್, ಡೀಸೆಲ್ ಗಳ ದರ ಹೆಚ್ಚಳದ ವಿರುದ್ಧ 7 ಎಡ ಮತ್ತು ಪ್ರಜಾತಾಂತ್ರಿಕ ಪಕ್ಷಗಳ ಓಕ್ಕೂಟದ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಇಂದು ಆನ್ ಲೈನ್ ಪ್ರತಿಭಟನೆ ಕೈಗೊಳ್ಳಲಾಯಿತು.
ರಾಜ್ಯದಲ್ಲಿ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು 7 ಎಡ ಮತ್ತು ಪ್ರಜಾತಾಂತ್ರಿಕ ಪಕ್ಷಗಳ ಒಕ್ಕೂಟವು ತೀವ್ರವಾಗಿ ಖಂಡಿಸುತ್ತವೆ.
ಅಲ್ಲದೇ ಪೆಟ್ರೋಲ್, ಡೀಸೆಲ್ ಗಳ ದರವು ನಿರಂತರವಾಗಿ ಹೆಚ್ಚುತ್ತಿದ್ದು ಜನತೆಯ ಗಾಯದ ಮೇಲೆ ಬರೆಯನ್ನು ಹಾಕಿದಂತಾಗುತ್ತಿದೆ. ಹೀಗೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಮಹಾಮಾರಿಯ ವ್ಯಾಪಸಿ ಅಪಾರ ಪ್ರಮಾಣದ ಸಾವು ನೋವುಗಳಾಗುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಬೆಲೆ ಏರಿಕೆಗಳಿಂದ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ.
ವಿದ್ಯುತ್ ದರವು ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಂತೆ ಏರಿಕೆ ಮಾಡಲಾಗಿದೆ. ಜೊತೆಗೆ ನಿಗದಿತ ಠೇವಣಿ ಮೊತ್ತವನ್ನೂ ಏರಿಕೆ ಮಾಡಲಾಗಿದೆ. ಬೇರೆ ಕೆಲವು ರಾಜ್ಯಗಳಲ್ಲಿ ವಿದ್ಯುತ್, ನೀರಿನ ಶುಲ್ಕಗಳ ಪಾವತಿಯನ್ನು ರದ್ದುಗೊಳಿಸಿದ ಅಥವಾ ಮುಂದೂಡಿದ ನಿದರ್ಶನಗಳಿರುವಾಗ, ನಮ್ಮ ರಾಜ್ಯದಲ್ಲಿ ಪೂರ್ವಾನ್ವಯವಾಗುವಂತೆ ದರ ಏರಿಕೆ ಮಾಡಿರುವುದು ಪ್ರತಿಭಟನೆಯ ಮೂಲಕ ಖಂಡಿಸಲಾಯಿತು.
ನಷ್ಟ ಸರಿದೂಗಿಸಲು ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಕೋವಿಡ್ ಪರಿಹಾರದ ಹೆಸರಿನಲ್ಲಿ ಒಂದು ಕೈಯಲ್ಲಿ ಪುಡಿಗಾಸನ್ನು ನೀಡಿ ಇನ್ನೊಂದು ಕೈಯಲ್ಲಿ ಈ ರೀತಿ ವಿದ್ಯುತ್, ಪೆಟ್ರೋಲ್ ಗಳ ಮೂಲಕ ಸುಲಿಗೆ ಮಾಡುತ್ತಿರುವ ಸರ್ಕಾರಗಳು ಜನತೆಗೆ ಮಹಾದ್ರೋಹವನ್ನು ಎಸಗುತ್ತಿವೆ.
ವಿದ್ಯುತ್ ರಂಗವು ಸರ್ಕಾರದ ವ್ಯಾಪ್ತಿಯಲ್ಲಿರುವಾಗಲೇ ಇಂತಹ ಪರಿಸ್ಥಿತಿ ಇರುವಾಗ, ಖಾಸಗೀಕರಣಗೊಂಡಲ್ಲಿ ಎಷ್ಟು ನಿರ್ದಯಿಯಾಗಬಹುದು ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು.
ಪೆಟ್ರೋಲ್ ಡೀಸೆಲ್ ಬೆಲೆ ಬುಧುವಾರ ಮತ್ತೆ ಏರಿಕೆಯಾಗಿದೆ. ಆ ಮೂಲಕ ರಾಜ್ಯದ ಏಳು ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್ ದರ 100 ರೂ. ಗಳ ಗಡಿ ದಾಟಿದೆ. ಬೆಲೆ ಏರಿಕೆಯ ಮಧ್ಯೆ ಜನಸಾಮಾನ್ಯರು ಜೀವನ ನಡೆಸಲು ಕಷ್ಟವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತೀ ಹೆಚ್ಚು ತೆರಿಗೆಯನ್ನು ಇಂಧನದ ಮೇಲೆ ಹಾಕಿದೆ. ಅಲ್ಲದೇ ಕೋವಿಡ್ ಮಹಾಮಾರಿಯ ಸಂಕಷ್ಟದ ನಡುವೆಯೂ ಬಡ ಜನತೆಗೆ ಕೈಯಲ್ಲಿ ಕೆಲಸವಿಲ್ಲದೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ತೈಲ ಬೆಲೆ ಏರಿಕೆ ಜನತೆಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತದೆ.
ಬೆಲೆ ಏರಿಕೆಯಿಂದ ಬಡವರು ಕಂಗಾಲಾಗಿ ಹೋಗಿದ್ದಾರೆ. ದೇಶದಲ್ಲಿ ಸಾಂಕ್ರಾಮಿಕ ರೋಗ, ಆರ್ಥಿಕ ಕುಸಿತ, ನಿರುದ್ಯೋಗ, ವೇತನ ಕಡಿತ, ಉದ್ಯೋಗ ಕಡಿತದಿಂದಾಗಿ ಸಂಕಷ್ಟದಲ್ಲಿರುವ ಜನರ ಮೇಲೆ ವಿದ್ಯುತ್, ಪೆಟ್ರೋಲ್ ಮತ್ತಿ ಡೀಸೆಲ್ ಬೆಲೆಗಳ ಏರಿಕೆಯು ಭಾರಿ ಹೊಡೆತ ಬಿದ್ದಿದೆ.
ವಿದ್ಯುತ್ ದರ ಮತ್ತು ಪೆಟ್ರೋಲ್, ಡೀಸೆಲ್ ದರ ಏರಿಕೆಗಳ ಈ ಜನವಿರೋಧಿ ತೀರ್ಮಾನವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.
ಆನ್‍ಲೈನ್ ಪ್ರತಿಭಟನೆಯಲ್ಲಿ ಹೆಚ್. ವ್ಹಿ. ದಿವಾಕರ್, ಭೀಮಾ ಶಂಕರ್ ಮಾಡ್ಯಾಳ್, ಶರಣಬಸ್ಸಪ್ಪ ಮಮಶೆಟ್ಟಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.