ಬೆಲೆ ಏರಿಕೆ ನಡುವೆ ಸಂಕ್ರಾಂತಿಗೆ ಭರಾಟೆ ಖರೀದಿ

ಸತತ ಎರಡು ವರ್ಷಗಳ ಕೊರೊನಾ ಬಳಿಕ ಈ ವರ್ಷ ಮಕರ ಸಂಕ್ರಾಂತಿ ಕಳೆಕಟ್ಟಿದೆ. ದರ ಏರಿಕೆ ಮಧ್ಯೆಯೇ ಜನರು ಸಂಕ್ರಾಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬ ಮಕರ ಸಂಕ್ರಾಂತಿ. ಸೂರ್ಯನು ತನ್ನ ಪಥವನ್ನು ಬದಲಿಸುವ ಈ ದಿನವನ್ನು ದೇಶದಾದ್ಯಂತ ವಿವಿಧ ಹೆಸರು , ಆಚರಣೆ, ಸಂಪ್ರದಾಯಗಳಲ್ಲಿ ಆಚರಿಸಲಾಗುತ್ತದೆ. ಊರಿನ ಪ್ರತಿ ಬೀದಿಯಲ್ಲೂ ಸಂಭ್ರಮ ಮನೆ ಮಾಡಿರುತ್ತದೆ. ಎಳ್ಳು-ಬೆಲ್ಲ ಬೀರುವುದುದೇನೂ, ಎತ್ತುಗಳನ್ನು ಕಿಚ್ಚಿನ ಮಧ್ಯೆ ಹಾಯಿಸುವುದೇನೂ, ಗಾಳಿ ಪಟ ಹಾರಿಸುವುದೇನೋ ಹೀಗೆ ನಾನಾ ತರಹದ ಸಂಭ್ರಮ ಸಡಗರ ಎಲ್ಲ ಕಡೆಯೂ ಸಾಮಾನ್ಯವಾಗಿರುತ್ತದೆ.
ಸೂರ್ಯ ದೇವನ ಹಬ್ಬವೆಂದು ಪರಿಗಣಿಸಲಾದ ಈ ಹಬ್ಬವನ್ನು ಪ್ರತಿವರ್ಷ ಜನವರಿ ೧೪ರಂದು ಆಚರಣೆ ಮಾಡಲಾಗುತ್ತದೆ. ಗುಜರಾತ್ನಲ್ಲಿ ಇದನ್ನು ಉತ್ತರಾಯಣ ಎಂಬ ಹೆಸರಿನಿಂದ, ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್ನಲ್ಲಿ ಮಾಘಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ದಂತಕಥೆಯ ಪ್ರಕಾರ ಸಂಕ್ರಾಂತಿ ಎಂಬ ದೇವತೆಯು ಶಂಕರಸೂರ್ ಎಂಬ ರಾಕ್ಷಸನನ್ನು ಕೊಂದಳು. ಅದಕ್ಕೆ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ ನಂತರದ ದಿನವನ್ನು ಕರಿಡಿನ್ ಅಥವಾ ಕಿಂಕ್ರಾಂಟ್ ಎಂದು ಕರೆಯಲಾಗುತ್ತದೆ. ಈ ದಿನ, ದೇವಿಯು ಕಿಂಕರಾಸೂರ್ ಎಂಬ ರಾಕ್ಷಸನನ್ನು ಸಹ ಕೊಂದಳು ಎಂಬ ಮಾಹಿತಿ ಇದೆ. ಹಿಂದೂ ಪಂಚಾಂಗದಲ್ಲಿ ಈ ಸಂಕ್ರಾಂತಿಯ ಕುರಿತು ಸಂಪೂರ್ಣ ಮಾಹಿತಿ ಇದ್ದು, ಆಕೆಯ ವಯಸ್ಸು, ಬಟ್ಟೆ, ನಿರ್ದೇಶನ ಹಾಗೂ ಚಲನವಲನಗಳ ಕುರಿತು ಕೂಡ ಮಾಹಿತಿ ಇದೆ. ಕೆಲವು ಕಥೆಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು ದೇವರುಗಳು ಭೂಮಿಯ ಮೇಲೆ ಇಳಿದು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಈ ಕಾರಣದಿಂದಾಗಿ, ಗಂಗಾ ಸ್ನಾನವನ್ನು ಇಂದು ವಿಶೇಷ ಪ್ರಾಮುಖ್ಯತೆ ಎಂದು ಪರಿಗಣಿಸಲಾಗಿದೆ. ಮಹಾಭಾರತ ಕಾಲದಲ್ಲಿ ಭೀಷ್ಮ ಪಿತಾಮಹ ತನ್ನ ದೇಹವನ್ನು ತ್ಯಜಿಸಲು ಮಕರ ಸಂಕ್ರಾಂತಿಯ ದಿನವನ್ನು ಆರಿಸಿಕೊಂಡಿದ್ದ.
ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ. ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಪ್ರಕಾರ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುತ್ತಾರೆ. ಆಂಧ್ರದಲ್ಲಿ ಈ ದಿನ ಶ್ರೀರಾಮನ ಪೂಜೆಯನ್ನು ಮಾಡುತ್ತಾರೆ. ತಮಿಳುನಾಡಿನಲ್ಲಿ ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿಸಿದ ಒಲೆಯಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ಪೊಂಗಲ್ ತಯಾರಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆ ಇದೆ. ಪಂಚಾಗದ ಪ್ರಕಾರ ಜ.೧೪ರ ಶನಿವಾರ ರಾತ್ರಿ ೮.೨೧ಕ್ಕೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿರುವುದರಿಂದ ಮಕರ ಸಂಕ್ರಾಂತಿಯ ಪುಣ್ಯಕಾಲವು ಭಾನುವಾರ ಮಧ್ಯಾಹ್ನ ೧೨.೩೦ರವರೆಗೆ ಇರುತ್ತದೆ. ಹೀಗಾಗಿ ನಾಳೆಯೂ ಕೆಲವೆಡೆ ಸಂಕ್ರಾಂತಿ ಆಚರಿಸುತ್ತಾರೆ.