ಬೆಲೆ ಏರಿಕೆ ಖಂಡಿಸಿ ಎಎಪಿ ಬೃಹತ್ ಪ್ರತಿಭಟನೆ

ಬೆಂಗಳೂರು, ಜು. ೨೦- ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿಯ ಡಬಲ್ ಎಂಜಿನ್ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಹಾಗೂ ಭ್ರಷ್ಟಾಚಾರವು ಡಬಲ್ ಆಗುತ್ತಿದೆ. ಮೊಸರು, ಮಜ್ಜಿಗೆಯಂತಹ ಅತೀ ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ವಿಧಿಸಿ, ಜನರ ಜೇಬಿಗೆ ಕತ್ತರಿ ಹಾಕುವುದೊಂದೇ ತಮ್ಮ ಗುರಿ ಎಂಬುದನ್ನು ಬಿಜೆಪಿ ಸಾಬೀತು ಪಡಿಸಿದೆ. ೨೦೧೪ರ ತನಕ ಸಣ್ಣ ಪ್ರಮಾಣದ ಬೆಲೆ ಏರಿಕೆಗೂ ಬಂದ್‌ಗೆ ಕರೆ ನೀಡುತ್ತಿದ್ದ ಬಿಜೆಪಿ ನಾಯಕರು ಈಗ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು” ಎಂದು ಬೆಂಗಳೂರು ನಗರ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಚನ್ನಪ್ಪ ಗೌಡ ನಲ್ಲೂರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕೆಎಂಎಫ್‌ಗೆ ವಾಪಸ್ ನೀಡುವುದು ನಿಜವಾಗಿದ್ದರೆ, ಮಾರುಕಟ್ಟೆಯಲ್ಲಿ ಮೊಸರು, ಮಜ್ಜಿಗೆಯ ಬೆಲೆ ಏರಿಕೆಯಾಗಿದ್ದೇಕೆ ಎಂದು ಪ್ರಶ್ನಿಸಿದರು.
ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ ಕುಶಲ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹೆಚ್ಚು ತೆರಿಗೆ ಸಂಗ್ರಹಿಸುವುದನ್ನು ಮಹಾನ್ ಸಾಧನೆ ಎಂದು ಬಿಜೆಪಿ ಭಾವಿಸಿದೆ. ತೆರಿಗೆ ಏರಿಕೆಯಿಂದ ಸಂಗ್ರಹವಾದ ಹಣದಲ್ಲಿ ಲೂಟಿಗೆ ಅವಕಾಶವಿರುವ ಯೋಜನೆಯನ್ನು ಬಿಜೆಪಿ ಘೋಷಿಸುತ್ತದೆ. ಅದರಲ್ಲಿ ಶೇ.೪೦ ಕಮಿಷನ್ ಪಡೆದು, ಕಾಮಗಾರಿಯನ್ನು ಕಳಪೆಯಾಗಿಸುತ್ತದೆ. ಹೆಚ್ಚುವರಿ ತೆರಿಗೆಯು ಅಂತಿಮವಾಗಿ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಲ್ಲಿರುವ ಬಿಜೆಪಿ ಈಗ ಸಿಕ್ಕಿರುವ ಅವಕಾಶವನ್ನು ಕೊಳ್ಳೆ ಹೊಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ” ಎಂದು ಹೇಳಿದರು.
ಬೆಂಗಳೂರು ರಾಜಕೀಯ ಚಟುವಟಿಕೆಗಳ ಎಲ್ಲಾ ವಿಧಾನಸಭಾ ಅಧ್ಯಕ್ಷರುಗಳು ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು.