ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಾರ್ಟಿ ಬೃಹತ್ ಪ್ರತಿಭಟನೆ

ವಿಜಯಪುರ, ಜು.23-ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಾರ್ಟಿ ವಿಜಯಪುರ ನಗರದ ಪಧಾಧಿಕಾರಿಗಳು, ಕಾರ್ಯಕರ್ತರು ನಗರದ ಗಾಂಧಿ ಚೌಕ್ ನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ನಗರ ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಶ್ರೀ ಭೋಗೇಶ್ ಸೋಲಾಪುರ್ ಅವರು ಮಾತನಾಡಿ, “ಬಿಜೆಪಿಯ ಡಬಲ್ ಎಂಜಿನ್ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಹಾಗೂ ಭ್ರಷ್ಟಾಚಾರವು ಡಬಲ್ ಆಗುತ್ತಿದೆ. ಮೊಸರು, ಮಜ್ಜಿಗೆಯಂತಹ ಅತೀ ಅಗತ್ಯ ವಸ್ತುಗಳಿಗೂ ಜಿಎಸ್‍ಟಿ ವಿಧಿಸಿ, ಜನರ ಜೇಬಿಗೆ ಕತ್ತರಿ ಹಾಕುವುದೊಂದೇ ತಮ್ಮ ಗುರಿ ಎಂಬುದನ್ನು ಬಿಜೆಪಿ ಸಾಬೀತು ಪಡಿಸಿದೆ. 2014ರ ತನಕ ಸಣ್ಣ ಪ್ರಮಾಣದ ಬೆಲೆ ಏರಿಕೆಗೂ ಬಂದ್‍ಗೆ ಕರೆ ನೀಡುತ್ತಿದ್ದ ಬಿಜೆಪಿ ನಾಯಕರು ಈಗ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮೊಸರು, ಮಜ್ಜಿಗೆ ಮೇಲಿನ ಜಿಎಸ್‍ಟಿಗೆ ಸಂಬಂಧಿಸಿ ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸಿದ್ದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಿಎಂ ಹೇಳಿರುವಂತೆ, ಅವೆರಡರ ಮೇಲಿನ ಜಿಎಸ್‍ಟಿಯನ್ನು ಕೇಂದ್ರ ಸರ್ಕಾರವು ಕೆಎಂಎಫ್‍ಗೆ ವಾಪಸ್ ನೀಡುವುದು ನಿಜವಾಗಿದ್ದರೆ, ಮಾರುಕಟ್ಟೆಯಲ್ಲಿ ಮೊಸರು, ಮಜ್ಜಿಗೆಯ ಬೆಲೆ ಏರಿಕೆಯಾಗಿದ್ದೇಕೆ? ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನರಿಗೆ ತಪ್ಪು ಮಾಹಿತಿ ನೀಡಿದ್ದು ಖಂಡನೀಯ” ಎಂದು ಭೋಗೇಶ್ ಸೋಲಾಪುರ್ ಹೇಳಿದರು.
“ಹೆಚ್ಚು ತೆರಿಗೆ ಸಂಗ್ರಹಿಸುವುದನ್ನು ಮಹಾನ್ ಸಾಧನೆ ಎಂದು ಬಿಜೆಪಿ ಭಾವಿಸಿದೆ. ತೆರಿಗೆ ಏರಿಕೆಯಿಂದ ಸಂಗ್ರಹವಾದ ಹಣದಲ್ಲಿ ಲೂಟಿಗೆ ಅವಕಾಶವಿರುವ ಯೋಜನೆಯನ್ನು ಬಿಜೆಪಿ ಘೋಷಿಸುತ್ತದೆ. ಅದರಲ್ಲಿ 40% ಕಮಿಷನ್ ಪಡೆದು, ಕಾಮಗಾರಿಯನ್ನು ಕಳಪೆಯಾಗಿಸುತ್ತದೆ. ಹೆಚ್ಚುವರಿ ತೆರಿಗೆಯು ಅಂತಿಮವಾಗಿ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಲ್ಲಿರುವ ಬಿಜೆಪಿ ಈಗ ಸಿಕ್ಕಿರುವ ಅವಕಾಶವನ್ನು ಕೊಳ್ಳೆ ಹೊಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ” ಎಂದು ಭೋಗೇಶ್ ಸೋಲಾಪುರ್ ಅವರು ಹೇಳಿದರು.
“ಮೋದಿ ಸರ್ಕಾರವು ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು ವಿಪರೀತ ಹೆಚ್ಚಿಸಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಭಾರತೀಯರಿಗೆ ಅದರ ಲಾಭ ಸಿಗುತ್ತಿಲ್ಲ. ಅಡುಗೆ ಅನಿಲದ ಸಬ್ಸಿಡಿಯನ್ನು ರದ್ದು ಪಡಿಸುವ ಮೂಲಕ ದೇಶದ ಬಡ ಹಾಗೂ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರವು ಮಹಾದ್ರೋಹ ಮಾಡಿದೆ. ಕೇವಲ ಶ್ರೀಮಂತ ಉದ್ಯಮಿಗಳ ಹಿತ ಕಾಪಾಡಿ, ಅವರಿಂದ ಪಕ್ಷಕ್ಕೆ ಬೃಹತ್ ಮೊತ್ತದ ದೇಣಿಗೆ ಪಡೆಯುವುದರಲ್ಲಿ ನಿರತವಾಗಿರುವ ಬಿಜೆಪಿಗೆ ಜನಸಾಮಾನ್ಯರ ಕಷ್ಟಗಳು ಕಾಣಿಸುತ್ತಿಲ್ಲ” ಎಂದು ಭೋಗೇಶ್ ಸೋಲಾಪುರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನರಾಜ ಬಸವಂತಿ, ನಗರ ಉಪಾಧ್ಯಕ್ಷ ನಿಹಾದ್ ಅಹಮದ್ ಗೋಡಿಹಾಳ, ಜಿಲ್ಲಾ ಖಜಾಂಚಿ ನಾರಾಯಣ್ ಸಂಸ್ಥಾನಿಕ್, ಪ್ರಧಾನ್ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕೆಂಗಿನಾಳ, ಮುಖಂಡರಾದ ಬಿ.ಎಂ.ಬಿರಾದಾರ್, ಯುವರಾಜ ಚೋಳಕೆ, ಬಾಬು ಬಿಜಾಪುರ, ಸಾಬಿರ್ ಮೋಮಿನ್, ಫಯಾಜ್ ಬಿರಾದಾರ್, ವರುಣ್ ಕುಲಕರ್ಣಿ, ಜ್ಯೋತಿಬಾ ಹೊನ್ನಕಲಸೆ, ಅಬೀದ್ ಪಠಾಣ್, ಸೋಲೊಮಾನ್ ಹೊಸಳ್ಳಿ, ದಯಾನಂದ್, ವಿನಾಯಕ್ ಅಲಬಾಲ್, ಸದ್ದಾಂ ಕೋರವಾರ್, ಮಸ್ತಾನ್, ಪುನೀತ್ ಬಿರಾದಾರ್ ಹಾಗೂ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು