ಬೆಲೆಬಾಳುವ ನಿವೇಶನ ಪರಿವಾರಕ್ಕೆ ಮಂಜೂರು: ಶಾಸಕ ರೇವೂರ್ ವಿರುದ್ಧ ಕ್ರಮಕ್ಕೆ ಅಲ್ಲಮಪ್ರಭು ಪಾಟೀಲ್ ಆಗ್ರಹ

ಕಲಬುರಗಿ,ಸೆ.12:ಬೆಲೆಬಾಳುವ ನಿವೇಶನವನ್ನು ತಮ್ಮ ಪರಿವಾರಕ್ಕೆ ಮಂಜೂರು ಮಾಡಿಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಅದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಒತ್ತಾಯಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳಿಗೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬೃಹತ್ ಧರಣಿಯ ನೇತೃತ್ವ ವಹಿಸಿ ಮನವಿ ಪತ್ರ ಸಲ್ಲಿಸಿದ ಅವರು, ತಮಗೆ ನೀಡಿರುವ ರಾಜಕೀಯ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಕುಟುಂಬದವರಿಗೆ ಬಹುಕೋಟಿ ಬೆಲೆ ಬಾಳುವ ಎಂಎಸ್‍ಕೆ ಮಿಲ್ ವಾಣಿಜ್ಯ ನಿವೇಶನಗಳು ಮಂಜೂರಾಗುವಂತೆ ನೋಡಿಕೊಂಡಿರುವ ರೇವೂರ್ ಅವರು ಘೋರ ಅಪರಾಧ ಮಾಡಿದ್ದಾರೆ ಎಂದು ದೂರಿದರು.
ತಮಗೆ ಜನ ನೀಡಿರುವ ಅಧಿಕಾರವನ್ನು ಸ್ವಾರ್ಥಕ್ಕಾಗಿ ಸ್ವಯಂ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಅಕ್ಷಮ್ಯ ಅಪರಾಧವಾಗಿದೆ. ಕೂಡಲೇ ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಎಂ. ರಾಚಪ್ಪ ಹಾಗೂ ವಿಷಯ ನಿರ್ವಾಹಕ ಸುಬ್ಬಾರಾವ್ ಅವರೊಂದಿಗೆ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ವಿರುದ್ಧವೂ ಸೂಕ್ತ ತನಿಖೆ ಕೈಗೊಳ್ಳುವ ಮೂಲಕ ಪ್ರಾಧಿಕಾರಕ್ಕೆ ಆಗಿರುವ ಆರ್ಥಿಕ ನಷ್ಟದ ಮೊತ್ತವಾದಂತಹ 4.30 ಕೋಟಿ ರೂ.ಗಳನ್ನು ವಸೂಲಿ ಮಾಡಬೇಕು. ವಾಣಿಜ್ಯ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ರೇವೂರ್ ಅವರು ತಮ್ಮ ರಾಜಕೀಯ ಅಧಿಕಾರ, ಪ್ರಭಾವವನ್ನು ಜನರ ಉಪಯೋಗಕ್ಕೆ ಬಳಸದೇ ಸ್ವಾರ್ಥಕ್ಕೆ ಬಳಸಿರುವುದು ಕೂಡ ಪ್ರಜಾಪ್ರತಿನಿಧಿ ಕಾಯ್ದೆಯ ದುರ್ಬಳಕೆಯಾಗುತ್ತದೆ. ಅವರು ಹೀಗೆ ಮಾಡುವ ಮೂಲಕ ಸಾರ್ವಜನಿಕವಾಗಿರುವ ನಗರಾಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗೆ ಭಾರೀ ನಷ್ಟ ಮಾಡಿರುವುದನ್ನು ದಾಖಲೆ ಸಮೇತ ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ಈಗಾಗಲೇ ಬಹಿರಂಗಪಡಿಸಿದ್ದಾರೆ. ಈ ಕುರಿತು ವಿಚಾರಣೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಎಂಎಸ್‍ಕೆ ಮಿಲ್ ಪಕ್ಕದಲ್ಲಿರುವ ಪ್ರಾಧಿಕಾರಕ್ಕೆ ಸೇರಿರುವ 15 ನಿವೇಶನಗಳ ಹರಾರು 2020ರಲ್ಲಿ ನಡೆದಿದೆ. ಡಾ. ಅಲೋಕ್ ಪಾಟೀಲ್, ಶ್ವೇತಾ ಪಾಟೀಲ್, ಶಾಂತಪ್ಪಾ ಅವರಷ್ಟೇ ಬಿಡ್ ಮಾಡಿದ್ದಾರೆ. ಅವರೆಲ್ಲರೂ ಶಾಸಕ ದತ್ತಾತ್ರೇಯ್ ಪಾಟೀಲ್ ಅವರ ಕುಟುಂಬದವರೇ ಆಗಿದ್ದಾರೆ. ಆ ಪೈಕಿ ಶಾಂತಪ್ಪ ಅಲಿಪೂರ್ ಅವರು ಶಾಸಕರ ಸಹೋದರ ಡಾ. ಅಲೋಕ್ ಅವರ ಪತ್ನಿ ಶ್ವೇತಾ ಅವರ ಸಹೋದರನಾಗಿದ್ದಾರೆ. ನಿವೇಶನ ಸಂಖ್ಯೆ 88 ಹಾಗೂ 88/1 ಇವುಗಳನ್ನು ಕಡಿಮೆ ಲಾಭದಲ್ಲಿಯೇ ಮಂಜೂರು ಮಾಡಲಾಗಿದೆ. ಪ್ರಾಧಿಕಾರಕ್ಕೆ ಇದರಿಂದಾಗಿ 4.30 ಕೋಟಿ ರೂ.ಗಳ ನಷ್ಟವಾಗಿದೆ. ಪ್ರಾಧಿಕಾರದ ಸಭೆಯಲ್ಲಿ ಇದನ್ನು ಪ್ರಶ್ನಿಸಿ ಮರು ಹರಾಜು ಮಾಡಬೇಕಿತ್ತು. ಅಥವಾ ನಿಯಮಗಳಂತೆ ಬಡ್ಡಿ ಸಮೇತ ನಿಗದಿತ ದಿನದಲ್ಲಿ ಹಣ ವಸೂಲಿಗೆ ಅವಕಾಶಗಳಿದ್ದರೂ ಯಾವುದನ್ನೂ ಮಾಡದೇ ಶಾಸಕರ ಪ್ರಭಾವಕ್ಕೆ ಮಣಿದು ಅಂದಿನ ಪ್ರಾಧಿಕಾರದ ಆಯುಕ್ತ ರಾಚಪ್ಪಾ, ವಿಷಯ ನಿರ್ವಾಹಕರು ಸೇರಿ ಇಂತಹ ಅವ್ಯವಹಾರಕ್ಕೆ ಬೆಂಬಲ ನೀಡಿದ್ದು ತಪ್ಪು. ಕೂಡಲೇ ತನಿಖೆ ಕೈಗೊಳ್ಳುವ ಮೂಲಕ ಪ್ರಾಧಿಕಾರಕ್ಕೆ ಆಗಿರುವ ನಷ್ಟ ಭರಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರಾಧಿಕಾರದ ಸಮಿತಿಯಲ್ಲಿ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಇರುವುದರಿಂದಲೇ ಇಲ್ಲಿ ತಮ್ಮ ಪರಿವಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದು ಅಕ್ರಮ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅವರು ಕಿಡಿಕಾರಿದರು.
ಅಫಜಲಪುರ ತಾಲ್ಲೂಕಿನ ಅಂಕಲಗಾದಲ್ಲಿ ದಿ. ಮಲ್ಲಿಕಾರ್ಜುನ್ ಪಾಟೀಲ್ ಅವರ ಹೆಸರಿನಲ್ಲಿದ್ದಂತಹ 112 ಎಕರೆ ಜಮೀನು ತಮ್ಮ ಹೆಸರಿಗೆ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಅವರು ತಮ್ಮನ್ನ ಉ ದಿ. ಮಲ್ಲಿಕಾರ್ಜುನ್ ಅವರ ದತ್ತು ಪುತ್ರ ಎಂದು ಹೇಳಿಕೊಂಡಿದ್ದಾರೆ. ವಿಚಿತ್ರವೆಂದರೆ ಅವರೇ ತಾವೇ ದತ್ತು ಪತ್ರ ಬರೆದಿದ್ದಾರೆ. ಒಪ್ಪಿಗೆ ಪತ್ರ ಕೂಡ ತಾವೇ ಬರೆಯುತ್ತಾರೆ. ತಾವೇ ವಾರ್ಸಾಕ್ಕೂ ಕೋರುತ್ತಾರೆ. ಅಫಜಲಪುರ ತಹಸಿಲ್ದಾರ್ ಕಚೇರಿಯ ಸಿಬ್ಬಂದಿ ಇಂತಹ ಸೂಕ್ಷ್ಮಗಳನ್ನು ಗಮನಿಸದೇ ವಿಲ್ ಡೀಡ್ ಇಲ್ಲದೇ ಸೂಕ್ತ ದತ್ತುಪತ್ರ ದಾಖಲೆ ಇಲ್ಲದೇ ಪ್ರಕರಣದಲ್ಲಿ ಶಾಸಕರ ಕೋರಿಕೆಯಂತೆ ಜಮೀನು ವರ್ಗಾವಣೆ ಮಾಡುತ್ತಾರೆ. ಇದು ಭೂ ಸುಧಾರಣೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಮತ್ತೊಂದು ಗಂಭೀರ ಆರೋಪ ಮಾಡಿದರು.
ದಿ. ಮಲ್ಲಿಕಾರ್ಜುನ್ ಪಾಟೀಲ್ ಅವರಿಗೆ ಇಷ್ಟೊಂದು ಜಮೀನು ಬಂತು ಎಲ್ಲಿಂದ? ಶಾಸಕರು ತಮ್ಮ ಹೆಸರಿಗೆ ಸೂಕ್ತ ದಾಖಲೆ ಇಲ್ಲದೇ ವರ್ಗಾವಣೆ ಹೇಗೆ ಮಾಡಿಕೊಂಡರು? ಎಂದು ಪ್ರಶ್ನಿಸಿರುವ ಅವರು, ಭೂ ಕಂದಾಯ ಕಾಯ್ದೆ ಉಲ್ಲಂಘನೆಯಾಗಿದ್ದು ಸ್ಪಷ್ಟ. ಕೂಡಲೇ ಎರಡೂ ಮೋಸ, ವಂಚನೆ ಹಾಗೂ ಆರ್ಥಿಕವಾಗಿ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಆಸ್ತಿ, ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಲಿಂಗರಾಜ್ ತಾರಫೈಲ್, ಲಿಂಗರಾಜ್ ಕಣ್ಣಿ, ವಾಣಿಶ್ರೀ ಸಗರಕರ್, ಬಾಂಬೆ ಶೇಠ್, ಈರಣ್ಣ ಝಳಕಿ, ಶ್ರೀಮತಿ ಚಂದ್ರಿಕಾ ಪರಮೇಶ್ವರ್ ಮುಂತಾವರು ಪಾಲ್ಗೊಂಡಿದ್ದರು.