ಮಾಸ್ಕೋ, ಜೂ.೧೭- ರಷ್ಯಾ ತನ್ನ ಪರಾಮಾಪ್ತ ರಾಷ್ಟ್ರಗಳಲ್ಲಿ ಒಂದಾಗಿರುವ ಬೆಲಾರೂಸ್‌ನಲ್ಲಿ ಮೊದಲ ಹಂತದ ಯುದ್ದತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ ಎಂಬ ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಆರೋಪ ಇದೀಗ ನಿಜವಾಗಿದೆ. ಬೆಲಾರೂಸ್‌ನಲ್ಲಿ ಅಣ್ವಸ್ತ್ರ ದಾಸ್ತಾನು ಇರಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟನ್ ಸ್ವತಹ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಬೆಚ್ಚಿಬೀಳಿಸಿದೆ.
ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಟಿನ್, ಯುದ್ಧತಂತ್ರದ ಪರಮಾಣು ಸಿಡಿತಲೆಗಳ ವರ್ಗಾವಣೆಯನ್ನು ಬೇಸಿಗೆಯ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ನಮ್ಮನ್ನು ಕಾರ್ಯತಂತ್ರದ ಮೂಲಕ ಸೋಲಿಸಲು ಯತ್ನಿಸುವವರಿಗೆ ನೆನಪಿಸಲು ಹಾಗೂ ಎಚ್ಚರಿಸಲು ಈ ರೀತಿಯ ಅಣ್ವಸ್ತ್ರ ದಾಸ್ತಾನು ಇಡಲಾಗಿದೆ. ಬೆಲಾರೂಸ್‌ನಲ್ಲಿ ಇಡಲಾಗಿರುವ ಅಣ್ವಸ್ತ್ರ ಬಳಕೆಯಾಗಲಿದೆಯೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುಟಿನ್, ನಾವು ಇಡೀ ಜಗತ್ತಿಗೆ ಏಕೆ ಬೆದರಿಕೆ ಹಾಕಬೇಕು? ರಷ್ಯಾದ ಸಾರ್ವಭೌಮತೆಗೆ ಅಪಾಯವಿದ್ದಲ್ಲಿ ಈ ರೀತಿಯ ತೀವ್ರ ಕ್ರಮಗಳ ಬಳಕೆ ಸಾಧ್ಯ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ಪುಟಿನ್ ತಿಳಿಸಿದರು. ಅತ್ತ ಪುಟಿನ್ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ ಮಾಡಿರುವಂತೆಯೇ ಹಲವು ಜಾಗತಿಕ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಪುಟಿನ್ ಹೇಳಿಕೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ವಿದೇಶಾಂಗ ಸಚಿವ ಆಂಥನಿ ಬ್ಲಿಂಕೆನ್, ವಿರುದ್ಧ ರಷ್ಯಾ ಪರಮಾಣು ಶಸ್ತ್ರಾಸ್ತ್ರ ಬಳಸುವ ಸಾಧ್ಯತೆ ತೀರಾ ಕಡಿಮೆ. ರಷ್ಯಾ ಪರಮಾಣು ಅಸ್ತ್ರವನ್ನು ಬಳಸಲು ತಯಾರಿ ನಡೆಸುತ್ತಿರುವ ಯಾವುದೇ ಸೂಚನೆಗಳು ನಮಗೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. ರಷ್ಯಾದ ಪ್ರಮುಖ ಪರಮಾಪ್ತ ರಾಷ್ಟ್ರಗಳಲ್ಲಿ ಬೆಲಾರೂಸ್ ಕೂಡ ಒಂದಾಗಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ಯುದ್ದ ಆರಂಭಿಸಿದಾಗ ಇದೇ ಬೆಲಾರೂಸ್ ಮೂಲಕ ರಷ್ಯಾ ತನ್ನ ಸಾಮರ್ಥ್ಯವನ್ನು ಹೊರಗೆಡವಿತ್ತು. ಇದೀಗ ಬೆಲಾರೂಸ್‌ನಲ್ಲಿ ಅಣ್ವಸ್ತ್ರ ನಿಯೋಜಿಸುವ ಮೂಲಕ ಪಾಶ್ಚಿಮಾತ್ಯ ದೇಶಗಳಿಗೆ ಪುಟಿನ್ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ