ಬೆಲರೂಸ್‌ಗೆ ಬಂದಿಳಿದ ಪ್ರಿಗೊಝಿನ್

ಮಿನ್ಸ್ಕ್ (ಬೆಲರೂಸ್), ಜೂ.೨೮- ರಷ್ಯಾದ ೨೪ ಗಂಟೆಗಳ ದಂಗೆಯ ನಾಯಕ ಎಂದೇ ಗುರುತಿಸಿಕೊಂಡಿರುವ ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಇದೀಗ ಒಪ್ಪಂದ ಭಾಗವಾಗಿ ಬೆಲರೂಸ್ ರಾಜಧಾನಿ ಮಿನ್ಸ್ಕ್‌ಗೆ ಆಗಮಿಸಿದ್ದಾರೆ. ಪ್ರಿಗೊಝಿನ್ ಆಗಮನವನ್ನು ಬೆಲರೂಸ್ ಅಧ್ಯಕ್ಷ ಅಲೆಗ್ಸಾಂಡರ್ ಲುಕಾಶೆಂಕೊ ಖಚಿತಪಡಿಸಿದ್ದಾರೆ.
ಉಕ್ರೇನ್‌ನಲ್ಲಿ ರಷ್ಯಾ ಪರವಾಗಿ ಹೋರಾಟ ನಡೆಸುತ್ತಿದ್ದ ವ್ಯಾಗ್ನರ್ ಗುಂಪು ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧವೇ ಕಾದಾಟಕ್ಕೆ ಇಳಿದಿತ್ತು. ಮಾಸ್ಕೋದಿಂದ ಕೇವಲ ೨೦೦ ಕಿ.ಮೀ. ದೂರದಲ್ಲಿದ್ದ ವ್ಯಾಗ್ನರ್ ಪಡೆಯು ಪುಟನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ರೀತಿಯ ಕೆಲಸ ನಡೆಸಿತ್ತು. ಆದರೆ ಬೆಲರೂಸ್ ಅಧ್ಯಕ್ಷ ಲುಕಾಶೆಂಕೊ ಅವರ ಸಮಯಪ್ರಜ್ಞೆ ಹಾಗೂ ಮಧ್ಯಪ್ರವೇಶದಿಂದ ದಂಗೆಯನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಪ್ರಿಗೊಝಿನ್ ಬಂದಿದ್ದರು. ಇನ್ನು ಒಪ್ಪಂದದ ಭಾಗವಾಗಿ ಪ್ರಿಗೊಝಿನ್‌ರನ್ನು ಬೆಲರೂಸ್‌ಗೆ ಕಳುಹಿಸುವ ಬಗ್ಗೆ ಮಾತುಕತೆ ನಡೆದಿತ್ತು. ಅದರಂತೆ ಇದೀಗ ಪ್ರಿಗೊಝಿನ್ ಬೆಲರೂಸ್‌ನ ರಾಜಧಾನಿ ಮಿನ್ಸ್ಕ್‌ಗೆ ತನ್ನ ಖಾಸಗಿ ವಿಮಾನದಲ್ಲಿ ಬಂದಿಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲುಕಾಶೆಂಕೊ, ವ್ಯಾಗ್ನರ್ ಗ್ರೂಪ್‌ನ ಸೈನಿಕರು ತಮ್ಮ ನಾಯಕ ಪ್ರಿಗೊಝಿನ್ ಅವರ ಜೊತೆ ಇರಲು ಬಯಸಿದರೆ ಪ್ರತ್ಯೇಕ ಮಿಲಿಟರಿ ನೆಲೆಯನ್ನು ಕಲ್ಪಿಸಲಾಗುವುದು. ನಿಮಗೆ ಬೇಕಾದ ಟೆಂಟ್, ಡೇರೆಗಳನ್ನು ನಿರ್ಮಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಇನ್ನು ಒಪ್ಪಂದದ ಅಡಿಯಲ್ಲಿ, ಪ್ರಿಗೊಜಿನ್ ಅವರಿಗೆ ಸೂಕ್ತ ಭದ್ರತೆಯ ಭರವಸೆ ನೀಡಲಾಗಿದ್ದು, ಅಲ್ಲದೆ ವ್ಯಾಗ್ನರ್ ವಿರುದ್ಧದ ರಷ್ಯಾದ ಕ್ರಿಮಿನಲ್ ಪ್ರಕರಣವನ್ನು ಕೈಬಿಡಲಾಗಿದೆ.