ಬೆರಳಚ್ಚು ಮುದ್ರೆಯಿಂದ ಸಿಕ್ಕಿಬಿದ್ದ ತಿಪ್ಪೆ, ಎಸಿ

ಬೆಂಗಳೂರು,ಮೇ ೧೩- ಐಷಾರಾಮಿ ಜೀವನಕ್ಕಾಗಿ ಮನೆಗಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಬೆರಳಚ್ಚು ಮುದ್ರೆಯ ನೆರವಿನಿಂದ ಗಿರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬನಶಂಕರಿಯ ವೀರಭದ್ರ ನಗರದ ನಾಗರಾಜ ಅಲಿಯಾಸ್ ಎಸಿ (೨೪), ಶೇಖರ್ ಅಲಿಯಾಸ್ ತಿಪ್ಪೆ (೨೬) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ೨.೧೦ ಲಕ್ಷ ಮೌಲ್ಯದ ೨೩ ಗ್ರಾಂ ಚಿನ್ನ, ೧೫೦ ಗ್ರಾಂ ಬೆಳ್ಳಿ, ಬಜಾಜ್ ಪಲ್ಸರ್ ಬೈಕ್, ೨ ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರು ತಿಳಿಸಿದ್ದಾರೆ.


ಆರೋಪಿಗಳು ಕಳೆದ ಏ. ೨೯ ರಂದು ಗಿರಿನಗರದ ರಮೇಶ್ ಎಂಬುವರು ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ತಮಿಳುನಾಡಿನ ಸೂಡಸಂದ್ದರ ಅಂಗಾಳ ಪರಮೇಶ್ವರಿ ಜಾತ್ರೆಗೆ ಕುಟುಂಬ ಸಮೇತ ಹೋಗಿದ್ದರು.
ರಮೇಶ್ ಅವರ ಮನೆಗೆ ಬೀಗ ಹಾಕಿದ್ದನ್ನು ಗಮನಿಸಿ, ಅಡುಗೆ ಮನೆಯ ವೆಂಟಿಲೇಟರ್‌ನ್ನು ಕಟ್ ಮಾಡಿ ಒಳ ನುಗ್ಗಿ ನಗದು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.
ಜಾತ್ರೆ ಮುಗಿಸಿಕೊಂಡು ವಾಪಸ್ ಬಂದು ರಮೇಶ್ ಅವರು ಕಳ್ಳತನವಾಗಿರುವುದನ್ನು ಕಂಡು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ದೀಪಕ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆರಳಚ್ಚು ಮುದ್ರೆಯ ನೆರವಿನಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಾಗರಾಜ ಹಳೆಯ ಆರೋಪಿಯಾಗಿದ್ದು, ಆತನ ವಿರುದ್ಧ ವಿಜಯನಗರ, ಗಿರಿನಗರ, ಜೆಸಿ ನಗರ, ಹನುಮಂತ ನಗರಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ ಎಂದು ಹರೀಶ್ ಪಾಂಡೆ ತಿಳಿಸಿದರು. ಇವರಿಬ್ಬರ ಬಂಧನದಿಂದ ಗಿರಿನಗರ, ಬಸವನ ಗುಡಿಯ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ ಎಂದು ಹೇಳಿದರು.