ಬೆರಗು ಪುಸ್ತಕಗಳಿಗೆ ಕೇಂದ್ರ ಕಸಾಪ ದತ್ತಿ ಪ್ರಶಸ್ತಿ

ಆಲಮೇಲ:ಆ.11: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಎರಡು ಕೃತಿಗಳಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಲಭಿಸಿದೆ ಎಂದು ಪ್ರಕಾಶಕಿ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದ್ದಾರೆ.
ವಿಜಯಪುರದ ಶಂಕರ ಬೈಚಬಾಳ ಅವರ “ಭಾರತ ಸಿಂಹಾಸನ ರಶ್ಮಿ; ಕಾದಂಬರಿ ಹಾಗೂ ಕಡಣಿಯ ಡಾ. ರಮೇಶ ಎಸ್. ಕತ್ತಿ ಅವರ ‘ಏನನ್ನೂ ಹೇಳುವದಿಲ್ಲ’ ಕವನ ಸಂಕಲನ ಕ್ರಮವಾಗಿ 2020 ಮತ್ತು 2021ರ ಸಾಲಿನ ಸಮೀರವಾಡಿ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿಗೆ ಕೃತಿಗಳು ಆಯ್ಕೆಯಾಗಿವೆ ಎಂದು ಬಾಗಲಕೋಟ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ತಿಳಿಸಿದ್ದಾರೆ.
ಇದೇ ಅಗಷ್ಟ 13 ರಂದು ಜಮಖಂಡಿ ಪಟ್ಟಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ, ಖ್ಯಾತ ಕಾದಂಬರಿಕಾರ ಡಾ. ರಾಘವೇಂದ್ರ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರಕಾಶನ ಸಂಸ್ಥೆಯೊಂದರ ಎರಡು ಪುಸ್ತಕಗಳು ಪ್ರಶಸ್ತಿಗೆ ಭಾಜನಾಗಿದ್ದು ಸಂತಸ ತಂದಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.