ಬೆಮಳಖೇಡಾ ರಸ್ತೆ ಅಪಘಾತದಲ್ಲಿ ಮೃತ್ತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು :ಸಚಿವ ಶಂಕರ ಬಿ. ಪಾಟೀಲ್ ಮುನೇನಕೊಪ್ಪ

ಬೀದರ ನ.07: ಬೆಮಳಖೇಡಾ ರಸ್ತೆ ಅಪಘಾತದಲ್ಲಿ ಮೃತ್ತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೇರವು ನೀಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬಿ.ಪಾಟೀಲ ಮುನೇನಕೊಪ್ಪ ಹೇಳಿದರು.

ಅವರು ಭಾನುವಾರ ಸಂಜೆ ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಬೆಮಳಖೇಡಾ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿ ಮಾತನಾಡಿದರು.

ಸರ್ಕಾರದ ವತಿಯಿಂದ ಮೃತ ಪ್ರತಿ ಕುಟುಂಬಕ್ಕೆ ತಲಾ 5ಲಕ್ಷ ರೂಪಾಯಿಗಳ ಚೆಕ್ ಇಂದು ಉಡಮನಳ್ಳಿ ಗ್ರಾಮಕ್ಕೆ ನಾನು ಖುದ್ದಾಗಿ ಭೇಟಿ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಿಲಾಗುವುದು ಮತ್ತು ಗಾಯಗೊಂಡವರಿಗೂ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಅವರು ಅದಷ್ಟು ಬೇಗನೆ ಗುಣಮುಖರಾಗಲಿ ಎಂದು ಹೇಳಿದರು.

ಸುಮಾರು 17 ಜನ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ಬೇರೆ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಸುಮಾರು ಏಳು ಜನರು ಸಾವನಪ್ಪಿರುತ್ತಾರೆ, ಇನ್ನು ಹತ್ತು ಜನರಿಗೆ ಚಿಕಿತ್ಸೆ ನಡೆಯುತ್ತಿದೆ, ಈ ಸಾವುಗಳು ಬಹಳ ದುಃಖದ ಸಂಗತಿಯಾಗಿದೆ. ಇಂತಹ ಸಾವು ಭಗವಂತ ತರಬಾರದು ಸಾವು ಆದಂತಹ ಸಂದರ್ಭದಲ್ಲಿ ಸರ್ಕಾರ ಅವರ ಮಾಹಿತಿಯನ್ನು ಪಡೆದು ಆರ್ಥಿಕ ಸಹಾಯವನ್ನು ಸಾವನಪ್ಪಿರುವ ಪ್ರತಿಯೊಬ್ಬರಿಗೆ ಐದು ಲಕ್ಷ ರೂಪಾಯಿ ಅವರ ಮನೆಗೆ ಹೋಗಿ ಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪರಿಹಾರ ಎಷ್ಟೇ ಕೊಡಬಹುದು ಆದರೆ ಜೀವನ ಮರಳಿ ತರಲು ಸಾಧ್ಯವಿಲ್ಲ, ಇದೇ ರೀತಿ ಕಾಶಿಗೆ ಹೋದಂತಹ ಸಂದರ್ಭದಲ್ಲಿ ಬೀದರ ಜಿಲ್ಲೆಯಲ್ಲಿ ಈ ತರಹ ಘಟನೆ ನಡೆದಿತ್ತು, ಆ ಘಟನೆಯು ಕೂಡ ಈಗ ನೆನಪಿಸುತ್ತಿದೆ, ಇವತ್ತು ಕೂಲಿಕಾರ್ಮಿಕರು ಕೂಡ ಬೇರೆ ಕಡೆ ಹೋದಂತಹ ಸಂದರ್ಭದಲ್ಲಿ ಬಹಳ ಜಾಗೃತೆಯಿಂದ ಜೀವನ ಮಾಡಬೇಕೆಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಒಂದೇ ಆಟೋದಲ್ಲಿ ಸುಮಾರು 17 ಜನರನ್ನು ಕೂಡಿಸಿಕೊಂಡು ಹೋಗುತ್ತಿರುವುದು ಆಗುತ್ತಿದೆ, ನಮ್ಮ ಕೂಲಿ ಕಾರ್ಮಿಕರು ಕೂಡ ಮುಂದಿನ ದಿನಮಾನದಲ್ಲಿ ಈ ಭಾಗದಲ್ಲಿ ಇನ್ನು ಹೆಚ್ಚಿನ ಉದ್ಯೋಗ ಕೊಡುವ ಅವಕಾಶಗಳು ಸಿಕ್ಕರೆ ಬೇರೆ ಕಡೆ ಹೋಗುವುದು ತಪ್ಪುತ್ತದೆ, ಈಗಾಗಲೇ ಎನ್.ಆರ್.ಇ.ಜಿ. ಯಲ್ಲಿ ಕೂಡ ಅನೇಕ ಕಾರ್ಯಕ್ರಮಗಳು ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಯುತ್ತಿದೆ. ನಮ್ಮ ಬೀದರ ಜಿಲ್ಲೆಯಲ್ಲಿ ಬೇರೆ ಕಡೆ ದುಡಿಯುವುದಕ್ಕೆ ಹೋಗುತ್ತಿರುವುದು ಕಡಿಮೆಯಾಗಬೇಕು. ಇಲ್ಲೇ ಉದ್ಯೋಗ ಸೃಷ್ಠಿ ಮಾಡುವಂತಹ ವಿಚಾರ ಕೂಡ ಸರ್ಕಾರದ ಮುಂದೆ ಇದೆ. ಇಲ್ಲಿಯ ಅನೇಕ ಇಂಡಸ್ಟ್ರೀಗಳಿಗೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ನಾವು ಅವರಿಗೆ ಒತ್ತು ನೀಡುತ್ತೇವೆ ಎಂದರು.

ಕೆ.ಡಿ.ಪಿ.ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನು ಕೊಡುತ್ತೇನೆ. 15 ಎಕರೆ ಜಾಗವನ್ನು ಕೊಟ್ಟರೆ ಬೀದರನಲ್ಲಿ ಒಂದು ಟ್ಯಾಕ್ಸ್‍ಟೈಲ್ ಪಾರ್ಕ್ ಸ್ಥ್ಥಾಪಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಇದರಿಂದ 5 ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಈ ಬಜೇಟ್‍ನಲ್ಲಿ ಘೋಷಣೆ ಮಾಡಬೇಕೆಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ನಂತರ ಸಚಿವರು ಉಡಮನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಸಂತ್ರಸ್ಥರಿಗೆ ಸಾಂತ್ವನ ಹೇಳಿ ಪ್ರತಿ ಕುಟುಂಬಕ್ಕೆ ತಲಾ 5ಲಕ್ಷ ರೂ. ಗಳ ಚೆಕ್ ವಿತರಿಸಿ ಸರ್ಕಾರ ನಿಮ್ಮೊಂದಿಗೆ ಇದೆ ತಾವು ಯಾವುದೇ ಕಾರಣಕ್ಕೆ ದೈರ್ಯ ಕಳೆದುಕೊಳ್ಳಬಾರದು ಸರ್ಕಾರದಿಂದ ತಮಗೆ ಎಲ್ಲಾ ರೀತಿಯ ಸಹಾಯ-ಸಹಕಾರ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೀದರ ದಕ್ಷಿಣ ಶಾಸಕರಾದ ಬಂಡೆಪ್ಪ ಖಾಶೆಂಪೂರ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ, ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ ಬಾಬು ಜಿಲ್ಲಾ ಆರೋಗ್ಯಾಧಿಕಾರಿ ರತಿಕಾಂತ ಸ್ವಾಮಿ, ಬ್ರೀಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.